ಜಿಲ್ಲೆ

ಫೆ.19ರಂದು ನಗರದಲ್ಲಿ ರಂಗ ಪ್ರಯೋಗ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾಹಿತಿ

reportermys

ಮಂಡ್ಯ: ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಫೆ.19ರಂದು ಸಂಜೆ 6.30ಕ್ಕೆ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಕಥೆಗಳ ಆಧಾರಿತ ‘ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು’ ರಂಗಪ್ರಯೋಗ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.
ದೇಶಕ್ಕಾಗಿ ನಾವು ಇದ್ದೇವೆ ಎನ್ನುವುದಕ್ಕಿಂತ ದೇಶ ನಮಗಾಗಿ ಇದೆ ಎಂದು ಗಾಢವಾಗಿ ನಂಬಿರುವ ರಾಜಕಾರಣಿಗಳೇ ಎಲ್ಲ ಕಡೆ ತುಂಬಿ ತುಳುಕಾಡುತ್ತಿರುವ ಈ ಹೊತ್ತಿನಲ್ಲಿ ಗಾಂಧೀಜಿ ಅವರ ಕನಸಿನ ಸೇವೆಗಿರುವ ಅರ್ಥವು ಎಲ್ಲ ರೀತಿಯಲ್ಲೂ ಭ್ರಷ್ಟಗೊಂಡು ಜನ ಜೀವನವೆಲ್ಲವೂ ನೈತಿಕ ಅವನತಿಯತ್ತ ಸಾಗುತ್ತಿರುವುದು ಕಳವಳಕಾರಿ ಸಂಗತಿ. ಇಂತಹ ಸಮಯದಲ್ಲಿ ಅಧಃಪತನ ತಡೆಯಬಲ್ಲ ಶಕ್ತಿ ಕಲಾ ಮಾಧ್ಯಮಕ್ಕಿದೆ. ಈ ಹಿನ್ನೆಲೆಯಲ್ಲಿ ರಂಗಪ್ರಯೋಗ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಸಂಘ, ಸಮತಾ ಸಿಂಧೂ ಟ್ರಸ್ಟ್, ಬೆಂಗಳೂರಿನ ಡಾ.ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ಸಹಯೋಗದಲ್ಲಿ ಮೈಸೂರು ರಂಗಾಂತರಂಗದ ಹವ್ಯಾಸಿ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಸಿ.ಬಸವಲಿಂಗಯ್ಯ ನಿರ್ದೇಶನ ಮಾಡಲಿದ್ದು, ರಂಗವಿನ್ಯಾಸ ಎಚ್.ಕೆ.ದ್ವಾರಕನಾಥ್ ರಂಗಾಯಣ ಮತ್ತು ಡಾ.ಕೆ.ವೈ.ನಾರಾಯಣಸ್ವಾಮಿ ಹಾಡುಗಳ ನಿರ್ವಹಣೆ ಹೊತ್ತಿದ್ದಾರೆ. ಸುಮಾರು ಒಂದೂವರೆ ಗಂಟೆಯ ಪ್ರದರ್ಶನ ನಡೆಯಲಿದೆ. ಪ್ರವೇಶ ಶುಲ್ಕವನ್ನು 50 ರೂ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
ಸಮತಾ ಸಿಂಧೂ ಟ್ರಸ್ಟ್ ಅಧ್ಯಕ್ಷ ಪ್ರೊ.ಹುಲ್ಕೆರೆ ಮಹಾದೇವ ಇದ್ದರು.