ಜಿಲ್ಲೆ

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಮೈಸೂರು ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ ಸಲಹೆ

reportermys

ಮಂಡ್ಯ: ವಿದ್ಯಾರ್ಥಿಗಳು ಪಠ್ಯ ಪುಸ್ತಕದೊಂದಿಗೆ ಸಾಹಿತ್ಯದ ಪುಸ್ತಕ ಓದುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ ಸಲಹೆ ನೀಡಿದರು.

ನಗರದ ಮಾಂಡವ್ಯ ಎಕ್ಸಲೆನ್ಸ್ ಪದವಿ ಕಾಲೇಜಿನಲ್ಲಿ ಅದಮ್ಯ ರಂಗ ಶಾಲೆ ಮೈಸೂರು ಹಾಗೂ ಎಸ್.ಬಿ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಸ್ಮರಣಾರ್ಥ ಪಿಯುಸಿ ಪಠ್ಯ ಆಧಾರಿತ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಹಿಂದೆ ನಾವು ಓದುವಾಗ ಟಿ.ವಿ, ಮೊಬೈಲ್, ಕಂಪ್ಯೂಟರ್ ಇರಲಿಲ್ಲ. ಓದಿಗೆ ಹೆಚ್ಚಿನ ಗಮನ ಕೊಡಬೇಕಿತ್ತು. ನಮ್ಮ ತಂದೆ ಡಾ.ಬೆಸಗರಹಳ್ಳಿ ರಾಮಣ್ಣ ಅವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದರು. ಹೊರಗಡೆ ಹೋದಾಗೆಲ್ಲ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ಇವತ್ತು ಆ ಪುಸ್ತಕಗಳೇ ನಮ್ಮನ್ನು ಉನ್ನತಮಟ್ಟಕ್ಕೆ ತಂದಿದೆ ಎಂದರು.

ಇಂದಿನ ವಿದ್ಯಾರ್ಥಿಗಳು ಇಂಜಿನಿಯರ್, ಡಾಕ್ಟರ್ ಆಗಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಮೊದಲು ಮಾನವನಾಗಬೇಕು. ಮನುಷ್ಯನನ್ನಾಗಿ ಪರಿವರ್ತಿಸುವ ಒಂದು ಕಲೆ ಓದಿಗೆ ಮಾತ್ರ ಸಾಧ್ಯ. ಡಾ.ಬೆಸಗರಹಳ್ಳಿ ರಾಮಣ್ಣ ಅವರ ಕಥೆಗಳಾದ ಪ್ರಜಾಪ್ರಭುತ್ವದ ಮೂರು ಮತಗಳು, ಗಾಂಧಿ, ಧರ್ಮ ಹೀಗೆ ನಾಲ್ಕು ಕಥೆಗಳನ್ನು ನಾಟಕ ರೂಪದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಲಾಗಿದೆ. ಮಂಡ್ಯದಲ್ಲೂ ಮುಂದಿನ ದಿಗಳಲ್ಲಿ ಮಾಡುತ್ತೇವೆ ಎಂದು ತಿಳಿಸಿದರು.

ಎಸ್.ಬಿ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ಡಾ.ಬೆಸಗರಹಳ್ಳಿ ರಾಮಣ್ಣ ಅವರದ್ದು ಶ್ರೇಷ್ಠ ವ್ಯಕ್ತಿತ್ವ. ತುಂಬ ಜನ ಅವರನ್ನು ಮೆಚ್ಚಿಕೊಳ್ಳುತ್ತಿದ್ದರು, ಆದರ್ಶರಾಗಿದ್ದರು, ಅವರು ಕನ್ನಡಿ ಇದ್ದ ಹಾಗೆ. ಅವರನ್ನು ನೋಡಿ ಎಷ್ಟೋ ಜನ ಜೀವನವನ್ನು ಸರಿದಾರಿಗೆ ಬರುವಂತೆ ಮಾಡಿಕೊಳ್ಳುತ್ತಿದ್ದರು ಎಂದು ಸ್ಮರಿಸಿದರು.

ಎಸ್.ಬಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಪಾಲುದಾರ ಶ್ರೀನಿವಾಸ್, ಉಪನ್ಯಾಸಕ ಮಹೇಶ್, ಸಾಹಿತಿ ಸತೀಶ್ ಜವರೇಗೌಡ, ರಂಗಭೂಮಿ ನಿರ್ದೇಶಕ ಮಂಡ್ಯ ಚಂದ್ರು, ರಂಗಸ್ವಾಮಿ, ಭೂಮಿ ಚಂದ್ರು ಇತರರಿದ್ದರು.

ಡಾ.ಬೆಸಗರಹಳ್ಳಿ ರಾಮಣ್ಣ ವಿರಚಿತ ಗಾಂಧಿ ಕಥೆಯನ್ನು ಪಿಯುಸಿ ಪಠ್ಯಾಧಾರಿತ ನಾಟಕವನ್ನಾಗಿ ಪ್ರಯೋಗ ಮಾಡಿ ಪ್ರದರ್ಶನ ನೀಡಲಾಯಿತು.