ಮಂಡ್ಯ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೋವಿಡ್-19 ಕುರಿತು ಎಲ್‌ಇಡಿ ವಾಹನಗಳಲ್ಲಿ ನಡೆಸುತ್ತಿರುವ ವಿಶೇಷ ಜಾಗೃತಿ ಕಾರ್ಯಕ್ರಮ ರದ್ದುಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಎದುರು ಜಮಾವಣೆಗೊಂಡ ಕಲಾವಿದರು, ಇಲಾಖೆಯ ನೋಂದಾಯಿತ ಕಲಾ ತಂಡಗಳಿಗೆ ಜಾಗೃತಿ ಕಾರ್ಯಕ್ರಮ ನೀಡುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಜಾನಪದ ಹಾಗೂ ಬೀದಿ ನಾಟಕ ಕಲಾವಿದರು 20 ವರ್ಷದಿಂದ ವಾರ್ತಾ ಇಲಾಖೆಯ ವಿವಿಧ ಹಂತಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನಜಾಗೃತಿಗಾಗಿ ಕಾರ್ಯಕ್ರಮ ಮಾಡುತ್ತಾ ಬದುಕನ್ನು ಕಟ್ಟಿಕೊಂಡಿದ್ದಾರೆ. ಕಳೆದ 8 ತಿಂಗಳಿಂದ ಇಲಾಖೆ ಹಾಗೂ ಬೇರೆ ಯಾವುದೇ ಕಾರ್ಯಕ್ರಮಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಲಾವಿದರಿಗಾಗಿಯೇ ಇರುವ ವಾರ್ತಾ ಇಲಾಖೆಯು, ಹೊರ ರಾಜ್ಯದ ಏಜೆನ್ಸಿ ಕಂಪನಿಗಳ ಮೂಲಕ ಎಲ್‌ಇಡಿ ವಾಹನದಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಸರಿಯಲ್ಲ. ಎಲ್‌ಇಡಿ ವಾಹನದ ಕಾರ್ಯಕ್ರಮ ಮುಂದುವರಿಸಿದಲ್ಲಿ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಬಸವಯ್ಯ, ನಾಗರಾಜು, ಮಂಜುಳಾ, ಬಸವರಾಜು, ಮೀನಾಕ್ಷಮ, ವೈರಮುಡಿ ಇತರರಿದ್ದರು.