ಜಿಲ್ಲೆ

ತಿಪಟೂರಿನ ಅಚ್ಚುತಕುಮಾರ್​ಗೆ ನಾಟಕ ಅಕಾಡೆಮಿ ಪ್ರಶಸ್ತಿ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಕರ್ನಾಟಕ ನಾಟಕ ಅಕಾಡೆಮಿ ಪ್ರಕಟಿಸಿರುವ 3 ವರ್ಷಗಳ ಪ್ರಶಸ್ತಿ ಪಟ್ಟಿಯಲ್ಲಿ ತುಮಕೂರು ಜಿಲ್ಲೆ ಸಿಂಹಪಾಲು ಪಡೆದಿದೆ. ರಂಗಭೂಮಿ ಕಲಾವಿದರ ತವರೂರು ತುಮಕೂರು ಜಿಲ್ಲೆಯ ನಾಟಕಕಾರ ಎಚ್​.ಎಸ್​.ಶಿವಪ್ರಕಾಶ್​ಗೆ 2023&24ನೇ ಸಾಲಿನ ಜೀವಮಾನದ ಸಾಧನೆ ಪ್ರಶಸ್ತಿ ಸಿಕ್ಕಿದ್ದರೆ, ನಟ ಅಚ್ಚುತಕುಮಾರ್​ ಸೇರಿ 8 ಕಲಾವಿದರು ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರಕ್ಕೆ ತುಮಕೂರಿನ ಹೇಮಮಾಲಿನಿ ಆಯ್ಕೆಯಾಗಿದ್ದಾರೆ.

ಅಚ್ಚುತಕುಮಾರ್​: ತಿಪಟೂರು ತಾಲೂಕಿನ ಹೊನ್ನವಳ್ಳಿಯ 58 ವರ್ಷದ ಅಚ್ಚುತಕುಮಾರ್​ ತಮ್ಮ ಉತ್ತಮ ಅಭಿನಯದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಶೇಷ್ಠ ನಟರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಕಲ್ಪತರು ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಅಚ್ಚುತ್​ ರಂಗಭೂಮಿಯ ಸೆಳೆತದಿಂದ ಶಿವಮೊಗ್ಗ ಜಿಲ್ಲೆಯ ನೀನಾಸಂನಲ್ಲಿ ನಟನೆ ತರಬೇತಿ ಪ್ರಾರಂಭಿಸಿದರು. ನೀನಾಸಂನ ತಿರುಗಾಟದಲ್ಲಿ ಪ್ರಮುಖ ನಟರಾಗಿ ಕಾಣಿಸಿಕೊಂಡ ಅಚ್ಚುತ್​ ಕುಮಾರ್​ ತನ್ನೊಳಗಿನ ಅಭಿನಯ ಕಲೆಯನ್ನು ಓರೆಗಚ್ಚಿದರು.

ತಿಪಟೂರಿನ ಪ್ರೊೆಷನಲ್​ ಥಿಯೇಟರ್​ ಯುನಿಟ್​ (ಪ್ರೊಥಿಯಾ) ಸಕ್ರಿಯಾ ಸದಸ್ಯರಾಗಿದ್ದ ಅಚ್ಚುತ್​ ಕುಮಾರ್​ ನಿರ್ದೇಶಕ ಗಿರೀಶ್​ ಕಾಸರವಳ್ಳಿ ಕಣ್ಣಿಗೆ ಬಿದ್ದರು. 2000 ದಲ್ಲಿ ದೂರದರ್ಶನ ಧಾರವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು. 2007 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅಚ್ಚುತ್​ ಹಿಂದಿರುಗಿ ನೋಡಲಿಲ್ಲ. ಮೂರು ಬಾರಿ ಫಿಲ್ಮೇರ್​ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪಶಸ್ತಿಗು ಭಾಜನರಾಗಿದ್ದಾರೆ.