ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ 275 ವ್ಯಾಪ್ತಿಯ ಮಡಿಕೇರಿ- ಸಂಪಾಜೆ ಮಾರ್ಗಕ್ಕೆ ಅನಧಿಕೃತ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಕಾಮಗಾರಿ ಸಂಚಕಾರ ತಂದೊಡ್ಡಿದೆ.
2018 ರಲ್ಲಿ ಮಡಿಕೇರಿ- ಸಂಪಾಜೆ ಮಾರ್ಗದಲ್ಲಿ ಭೂಕುಸಿತ ಉಂಟಾಗಿ ಹಲವು ತಿಂಗಳು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಈ ಮಾರ್ಗದಲ್ಲಿ 48 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಸುರಕ್ಷಿತೆಗಾಗಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಏತನ್ಮಧ್ಯೆ, ಅನುಮತಿ ನೀಡುವ ಮುನ್ನವೇ ಖಾಸಗಿ ಮೊಬೈಲ್ ಸಂಸ್ಥೆ ಅವೈಜ್ಞಾನಿಕವಾಗಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆಗೆ ಮುಂದಾಗಿದೆ. ಇದನ್ನೂ ಓದಿರಿ ಸೆಕ್ಸ್ ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿಯ ಮಚ್ಚೆ ಹುಡುಕಿದ ಮಹೇಶ್ ಕುಮಟಳ್ಳಿ!
ರಸ್ತೆಬದಿ ಮತ್ತು ರಸ್ತೆ ಕೆಳಭಾಗದಲ್ಲಿ ಮೂವತ್ತು ಮೀಟರ್ ಒಳಗೆ ಕೇಬಲ್ ಹಾಕಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ವಿಭಾಗ ಕಚೇರಿಗೆ ಕೇಬಲ್ ಅಳವಡಿಕೆಗೆ ಅರ್ಜಿ ಸಲ್ಲಿಸಿದ್ದಾರೆ. ಅನುಮತಿ ನೀಡುವ ಮುನ್ನವೇ ಅವೈಜ್ಞಾನಿಕ ಕೇಬಲ್ ಅಳವಡಿಕೆ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗೆ ತಡೆಗೋಡೆ ಕಾಮಗಾರಿ ಗುತ್ತಿಗೆದಾರರಾದ ಗ್ರೀನ್ ಲ್ಯಾಂಡ್ ಶರೀನ್- ಜಗದೀಶ್ ರೈ ತಡೆವೊಡ್ಡಿದ್ದಾರೆ.
ಕೇಬಲ್ ಅಳವಡಿಕೆ ಕಾಮಗಾರಿಯಿಂದ ರಸ್ತೆಬದಿ ಬಿರುಕು ಬಿಟ್ಟಿದೆ. ಮಳೆಗಾಲದಲ್ಲಿ ನೀರು ಒಳಗೆ ಸೇರಿ, ರಸ್ತೆ ಕೊಚ್ಚಿಕೊಂಡು ಹೋಗುವ ಆತಂಕವನ್ನು ಭೂಗರ್ಭಶಾಸ್ತ್ರಜ್ಞರಾದ ಕಪಿಲ್ ಸಿಂಗ್, ಕಮಲ್ ಕುಮಾರ್ ವ್ಯಕ್ತ ಪಡಿಸಿದ್ದಾರೆ. ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದೆಂದು ಮಾಹಿತಿ ನೀಡಿದ್ದಾರೆ.
ಜಿಲ್ಲಾಡಳಿತದಿಂದ ತಜ್ಞರ ತಂಡ ಸ್ಥಳಕ್ಕೆ ಕಳುಹಿಸಿ, ವರದಿ ಪಡೆದುಕೊಳ್ಳಲಾಗುವುದು. ತದನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.