ಜಿಲ್ಲೆ

ನಾಗೇಶ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಸ್ವೀಕಾರ

ಎ. ಆರ್. ರಘುರಾಮ

ಚನ್ನರಾಯಪಟ್ಟಣ : ದಾದಿಯರು ಸಂಬಳಕ್ಕಾಗಿ ಮಾತ್ರವಲ್ಲದೆ, ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ಬಿ.ಎಂ. ಗೋವಿಂದರಾಜು ಹೇಳಿದರು. ಪಟ್ಟಣದ ಜ್ಞಾನಸಾಗರ ವಿದ್ಯಾಸಂಸ್ಥೆಯ ಆವರಣದಲ್ಲಿ ನಾಗೇಶ್ ಆರೋಗ್ಯ ಮತ್ತು ಅರೆ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಎಸ್ಸಿ ನಸಿರ್ಂಗ್, ಜಿಎನ್‌ಎಂ ಹಾಗೂ ಅರೆ ವೈದ್ಯಕೀಯ ವಿದ್ಯಾರ್ಥಿಗಳ ದೀಪ ಪ್ರಜ್ವಲನ, ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಆದರೆ ಮಾನಸಿಕ ಸ್ಥೈರ್ಯ ತುಂಬಿ ರೋಗಿಯನ್ನು ಸಂಪೂರ್ಣ ಗುಣಮುಖ ಮಾಡುವ ಜವಾಬ್ದಾರಿ ದಾದಿಯರ ಮೇಲಿರುತ್ತದೆ. ಹಾಗಾಗಿ ಇಲ್ಲಿ ಮಾನವೀಯತೆಯ ಸೇವೆಯೇ ಪ್ರಧಾನ ಎಂದರು.
ವಿದ್ಯಾರ್ಥಿಗಳು ಯೌವನಾವಸ್ಥೆಗೆ ಕಾಲಿರಿಸುವ ಹಂತದಲ್ಲಿ ಹಲವು ರೀತಿಯ ಆಕರ್ಷಣೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಎಲ್ಲವನ್ನೂ ನಿಗ್ರಹಿಸಿ, ಆಯ್ದುಕೊಂಡಿರುವ ಕ್ಷೇತ್ರದ ಪಾವಿತ್ರ್ಯ ಹಾಗೂ ಜವಾಬ್ದಾರಿ ಅರಿತು ಶಿಕ್ಷಣ ಪೂರ್ಣಗೊಳಿಸಿದರೆ ನಾಡಿಗೆ ಉತ್ತಮ ದಾದಿಯರ ಕೊಡುಗೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ನಾಗೇಶ್, ಅರೆ ವೈದ್ಯಕೀಯ ಸಿಬ್ಬಂದಿ ಸೇವೆಯು ವೈದ್ಯರ ಸೇವೆಯಷ್ಟೇ ಸಮನಾಗಿದೆ ಎಂದರು.
ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಒಂದು ತಂಡದಂತೆ ಕೆಲಸ ನಿರ್ವಹಿಸಿದಾಗ ರೋಗಿಗೆ ಉತ್ತಮ ಸೇವೆ, ಆರೈಕೆ ದೊರಕುತ್ತದೆ. ದಾದಿಯರ ಹುದ್ದೆ ಪವಿತ್ರವಾದದ್ದು. ಯಾವುದೇ ವೈದ್ಯರು ಒಂದು ಜೀವವನ್ನು ಉಳಿಸುವ ಕಾರ್ಯ ಮಾಡುವ ಸಂದರ್ಭ ಶುಷ್ರೂಷಕರು ಮಾಡುವ ಸಹಕಾರ ಮೌಲ್ಯಯುತವಾದದ್ದು ಎಂದರು. ಶಿಕ್ಷಣ ಸಂಸ್ಥೆ ಸಿಇಒ ಡಾ. ಭಾರತಿ ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೀವ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಎಸ್. ಸಲೋಮಿ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಸಿ. ಲೋಕೇಶ್, ತಾಲೂಕು ಆರೋಗ್ಯಾಧಿಕಾರಿ ಎ.ಎನ್.ಕಿಶೋರ್ ಕುಮಾರ್, ಸಂಸ್ಥೆಯ ಡೀನ್ ಡಾ. ಸುಜಾ ಫಿಲಿಪ್, ಪ್ರಾಂಶುಪಾಲೆ ಆರ್.ಜೆ.ವಿದ್ಯಾರಾಣಿ, ಆಡಳಿತಾಧಿಕಾರಿ ಫಿಲಿಪ್ ಇತರರು ಇದ್ದರು.