‘ಗೆಜ್ಜೆ ತರಂಗ’ ಕಾರ್ಯಕ್ರಮವನ್ನು ನೃತ್ಯ ಗುರು ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಉದ್ಘಾಟಿಸಿದರು.  
ಜಿಲ್ಲೆ

ನಿರಂತರ ಅಭ್ಯಾಸದಿಂದ ಒಲಿಯುತ್ತದೆ ಸಂಗೀತ: ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಶಾಸ್ತ್ರೀಯ ನೃತ್ಯ ಕಲಿಕೆ ಮಾನಸಿಕ ಹಾಗೂ ದೈಹಿಕವಾಗಿ ನಮ್ಮನ್ನು ಗಟ್ಟಿಗೊಳಿಸುತ್ತದೆ. ನಿರಂತರ ಅಭ್ಯಾಸದಿಂದ ಮಾತ್ರ ಸಂಗೀತ ಒಲಿಸಿಕೊಳ್ಳಲು ಸಾಧ್ಯ ಎಂದು ನೃತ್ಯ ಗುರು ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಹೇಳಿದರು.

ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ, ಇತ್ತೀಚೆಗೆ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆ ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ ವತಿಯಿಂದ ‘ಗೆಜ್ಜೆ ತರಂಗ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೃತ್ಯ ಗುರು ನಟನ ತಿಲಕಂ ಸುರೇಂದ್ರನ್ ಪಟ್ಟೇನ್ ಮುಖ್ಯ ಅತಿಥಿಯಾಗಿದ್ದರು. ನಾರಿ ಚಿನ್ನಾರಿಯ ಅಧ್ಯಕ್ಷೆ ಸವಿತಾ ಐ.ಭಟ್ ಅಧ್ಯಕ್ಷತೆ ವಹಿಸಿದ್ದರು. ಯಶ್ನಾ ಬಿ.ನಾಯ್ಕ ಮತ್ತು ಶಾನ್ವಿ ಕೆ. ಅವರಿಂದ ಭರತನಾಟ್ಯ, ಕೃಷ್ಣಪ್ರಭಾ ಪಿಳ್ಳ್ಳೈ ಮೋಹಿನಿಯಾಟ್ಟಂ, ಧ್ರುವಿತಾ ಸಿ.ಎಸ್ ಅವರಿಂದ ಜಾನಪದ ನೃತ್ಯ, ಕೃಷ್ಣೇಂದು ಅವರಿಂದ ಕೂಚುಪುಡಿ ನೃತ್ಯ, ಶಿವಾನಿ ಕೂಡ್ಲು ಅವರಿಂದ ಕೇರಳ ನಟನಂ ಹಾಗೂ ಗೀತಪ್ರಿಯ ಡಿ. ಮತ್ತು ತೃಷಾ ಕೆ. ಯಕ್ಷಗಾನ ನೃತ್ಯ ಪ್ರದರ್ಶಿಸಿದರು.

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗವಿತ್ತು. ಕಿರಣ್ ಪ್ರಸಾದ ಕೂಡ್ಲು ಅವರನ್ನು ಅಭಿವಂದಿಸಲಾಯಿತು. ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ, ಸುರೇಂದ್ರನ್ ಪಟ್ಟೇನ್ ಮತ್ತು ವಿದುಷಿ ವಿದ್ಯಾಲಕ್ಷ್ಮೀ ಅವರನ್ನು ಗೌರವಿಸಿದರು. ನಾರಿ ಚಿನ್ನಾರಿಯ ಪ್ರಧಾನ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ಚಿನ್ನಾ ಸ್ವಾಗತಿಸಿದರು. ನಾರಿ ಚಿನ್ನಾರಿಯ ಸೂರ್ಯಕುಮಾರಿ ವಂದಿಸಿದರು.