ಮಂಗಳೂರು: ‘ನರೇಂದ್ರ ವಿಜಯ’ ಯಕ್ಷಗಾನಕ್ಕೆ ಪೇಕ್ಷಕರು ‘ನಮೋ’ ಎಂದಿದಾರೆ!
ಜಾಗತಿಕ ನೆಲೆಯಲ್ಲಿ ಭಾರತವನ್ನು ವಿಶ್ವರಾಷ್ಟ್ರಗಳ ಮುಂದೆ ಮುಂಪಕ್ತಿಯಲ್ಲಿ ನಿಲ್ಲುವಂತೆ ಮತ್ತು ಗೌರವಿಸುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಜೀವನದ ಸಂಕ್ಷಿಪ್ತ ಪೂರ್ವ ವೃತ್ತಾಂತ, ಗುಜರಾತ್ ಮುಖ್ಯಮಂತ್ರಿಯಾಗಿ ಅಭಿವೃದ್ಧಿ ಪರ್ವವನ್ನು ದೇಶಕ್ಕೆ ಪರಿಚಯಿಸಿದ ಮೋದಿಯವರ ಯಶೋಗಾಥೆ, ಅವರ ಬಲಗೈಯಾಗಿ ನಿಂತ ಅಮಿತ್ ಷಾ ಅವರ ವಿಶೇಷ ಪಾತ್ರ ಚಿತ್ರಣ, ಮೋದಿ ಆಡಳಿತ ಬಂದ ಮೇಲೆ ದೇಶದಲ್ಲಿ ನಡೆದ ಪಲ್ಲಟ, ನೋಟು ಅಮಾನ್ಯ ಹಾಗೂ ಪರಿಣಾಮ, ಸರ್ಜಿಕಲ್ ಸ್ಟ್ರೈಕ್ ಯಕ್ಷಗಾನದ ಪ್ರಮುಖಾಂಶ.
ತೀರ್ಥಹಳ್ಳಿಯ ಗಾಯತ್ರಿ ಮಹಿಳಾ ಯಕ್ಷಗಾನ ಮಂಡಳಿ, ಬಾಹ್ಮಣ ಸಂಘ ತೀರ್ಥಹಳ್ಳಿ ವತಿಯಿಂದ ಮಂಗಳೂರಿನ ಪಂಚಾಯತ್ ಸಂಘಟನೆ ಸಹಯೋಗದಲ್ಲಿ ಭಾನುವಾರ ಮಂಗಳೂರಿನ ಕೊಡಿಯಾಲ್ ಬೈಲ್ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.
ತೀರ್ಥಹಳ್ಳಿಯ ಜ್ಯೋತಿ ಶಾಸ್ತ್ರಿ ಬರೆದ ‘ನರೇಂದ್ರ ವಿಜಯ’ ಕೃತಿಗೆ ಪ್ರಸಂಗಕರ್ತೃ ಎಂ.ಕೆ.ರಮೇಶ ಆಚಾರ್ಯ ಯಕ್ಷಗಾನ ಶೈಲಿಯ ಪದ್ಯಗಳನ್ನು ಬರೆದು, ಪ್ರಸಂಗವಾಗಿ ಪರಿವರ್ತಿಸಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರದರ್ಶನಗೊಂಡ ಈ ಕಾಲ್ಪನಿಕ ಕಥಾ ಪ್ರಸಂಗ ಯಕ್ಷಗಾನ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರಾಗುವಂತೆ ಮಾಡಿತು.
ಈ ಕಥಾಪ್ರಸಂಗದಲ್ಲಿ ಮುಮ್ಮೇಳದಲ್ಲಿ ಜ್ಯೋತಿ ಶಾಸ್ತ್ರಿ, ವರದಾ ಐತಾಳ್, ಮಯೂರಿ ಉಪಾಧ್ಯಾಯ, ನಿರ್ಮಲಾ ಗೋಳಿಕೊಪ್ಪ, ಸವಿತಾ ಭಟ್, ಶ್ರಾವಣಿ ಭಟ್, ನಳಿನಿ ರಾವ್, ದಿಶಾ ಜೋಯಿಸ್, ಮಲ್ಲಿಕಾ ರಾಘವೇಂದ್ರ ಭಟ್ ಪಾತ್ರಧಾರಿಗಳಾಗಿ ಹಾಗೂ ಹಿಮ್ಮೇಳದಲ್ಲಿ ಭಾಗವತರಾಗಿ ನಾಗೇಶ ಕುಲಾಲ್ ನಾಗರಕೊಡಿಗೆ, ಮದ್ದಳೆ ಎನ್.ಜಿ.ಹೆಗ್ಡೆ, ಚೆಂಡೆ ಕೃಷ್ಣಮೂರ್ತಿ ಸಹಕರಿಸಿದರು.
ಉದ್ಘಾಟನೆ: ಯಕ್ಷಗಾನ ಪ್ರದರ್ಶನವನ್ನು ಪ್ರಸಂಗ ಕರ್ತೃ ಎಂ.ಕೆ.ರಮೇಶ ಆಚಾರ್ಯ ಉದ್ಘಾಟಿಸಿದರು. ಜ್ಯೋತಿ ಶಾಸ್ತ್ರಿ, ಕೇರಳ ಬಿಜೆಪಿ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ಪತ್ರಕರ್ತ ನಾರಾಯಣ ಚಂಬಲ್ತಿಮಾರ್, ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್, ಪಂಚಾಯತ್ ಸಂಘಟನೆ ಪ್ರಮುಖರಾದ ನರೇಶ್ ಶೆಣೈ ಉಪಸ್ಥಿತರಿದ್ದರು.
ನರೇಂದ್ರ ಮೋದಿಯವರ ಕುರಿತ ಕಥೆ ಬರೆಯಲು ಅವಕಾಶ ಸಿಕ್ಕಿದ್ದು, ಪ್ರಸಂಗವಾಗಿ ಯಕ್ಷಗಾನ ಪ್ರದರ್ಶನಗೊಳ್ಳುತ್ತಿರುವುದು ಪೂರ್ವಜನ್ಮದ ಪುಣ್ಯ. ಮೋದಿ ಆಡಳಿತಕ್ಕೆ ಬಂದ ಬಳಿಕ ಹೊರ ದೇಶದಲ್ಲೂ ಭಾರತೀಯರಿಗೆ ಗೌರವ ಸಿಗುತ್ತಿದೆ. ಮೋದಿ ನಮ್ಮ ಪಾಲಿಗೆ ದೇವತಾ ಸ್ವರೂಪಿ. ಅವರ ಜೀವನವನ್ನು ಎರಡೂವರೆ ಗಂಟೆಯಲ್ಲಿ ತೋರಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ.ಜ್ಯೋತಿ ಶಾಸ್ತ್ರಿ ‘ನರೇಂದ್ರ ವಿಜಯ’ ಪುಸ್ತಕದ ಕರ್ತೃ‘ನರೇಂದ್ರ ವಿಜಯ’ ಯಕ್ಷಗಾನದ ಪ್ರಥಮ ಪ್ರದರ್ಶನ ಇದಾಗಿದ್ದು, ಪ್ರೇಕ್ಷಕರು ಲೋಪದೋಷಗಳ ಕುರಿತು ತಿಳಿಸಿದರೆ, ತಿದ್ದಿಕೊಳ್ಳುತ್ತೇವೆ. ಇದರಿಂದ ಮುಂದಿನ ಬಾರಿ ಇನ್ನಷ್ಟು ಉತ್ತಮ ರೀತಿಯಲ್ಲಿ ಪ್ರದರ್ಶಿಸಲು ಸಾಧ್ಯವಾಗುತ್ತದೆ.ಎಂ.ಕೆ.ರಮೇಶ ಆಚಾರ್ಯ