ಸಾಲಿಗ್ರಾಮ: ವಿಶ್ವಕ್ಕೆ ಮಾದರಿಯಾಗಿರುವ ನರೇಂದ್ರ ಮೋದಿ ಅಂತಹ ಪ್ರಧಾನಿಯನ್ನು ಪಡೆದಿರುವುದು ನಮ್ಮ ದೇಶದ ಜನರ ಪುಣ್ಯ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸಾ.ರಾ.ತಿಲಕ್ ತಿಳಿಸಿದರು.
ತಾಲೂಕಿನ ಸಂಕನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ಕಿ ಬಾತ್ ಕಾರ್ಯಕ್ರಮವನ್ನು ಆಲಿಸಿದ ಬಳಿಕ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿ ಕೆಲಸ ಮತ್ತು ಸಾಧನೆಗಳನ್ನು ವಿಶ್ವದ ಯಾವುದೇ ದೇಶದ ಪ್ರಧಾನಿಗಳೂ ಮಾಡಿಲ್ಲ, ಹಲವು ದೇಶಗಳ ಪ್ರಧಾನಿಗಳು ನರೇಂದ್ರ ಮೋದಿ ಅವರನ್ನು ಮಾದರಿಯಾಗಿಟ್ಟುಕೊಂಡು ಅನೇಕ ಅಭಿವೃದ್ಧಿಗಳನ್ನು ಮಾಡುತ್ತಿರುವುದು ಜನಸಾಮಾನ್ಯರು ಮಾಧ್ಯಮಗಳ ಮೂಲಕ ಕಣ್ಣ ಮುಂದೆ ನೋಡುತ್ತಿದ್ದಾರೆ. ಅಂತಹ ಪ್ರಧಾನಿ ನಮ್ಮ ದೇಶದಲ್ಲಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಅವರ ಅಧಿಕಾರವಧಿಯಲ್ಲಿ ದೇಶಕ್ಕೆ ಕೊಟ್ಟ ಯೋಜನೆಗಳು ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶದವರೆಗೆ ಶಾಶ್ವತವಾಗಿ ಉಳಿಯುವಂತಹ ಯೋಜನೆಗಳಾಗಿವೆ. ಹಾಗಾಗಿ ನಮ್ಮ ಮತದಾರರು ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮದ ಅಂಗವಾಗಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಸಂಕನಹಳ್ಳಿ ಗ್ರಾಮದಲ್ಲಿ ತೆಂಗಿನ ಸಸಿಗಳನ್ನು ನೀಡಲಾಗುತ್ತಿದೆ ಎಂದರು.
ರಾಜ್ಯ ಮತ್ತು ರಾಷ್ಟ್ರ ನಾಯಕರ ಮಾರ್ಗದರ್ಶನದಲ್ಲಿ ಸಾಲಿಗ್ರಾಮ ತಾಲೂಕಿನಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಲು ಕಾರ್ಯಕರ್ತರು ಮುಂದಾಗಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಯೋಜನೆಗಳನ್ನು ಮತ್ತು ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಸೇರಿದಂತೆ ಹಲವು ಬಿಜೆಪಿ ಮುಖ್ಯಮಂತ್ರಿಗಳು ಕೊಟ್ಟ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡೋಣ ಎಂದರು.
ಇದಕ್ಕೂ ಮೊದಲು ತಾಲೂಕು ಬಿಜೆಪಿ ಮುಖಂಡರು ಮತ್ತು ಸಂಕನಹಳ್ಳಿ ಗ್ರಾಮಸ್ಥರು ಬಿಜೆಪಿ ತಾಲೂಕು ಅಧ್ಯಕ್ಷ ಸಾ.ರಾ.ತಿಲಕ್ ಅವರ ನೇತೃತ್ವದಲ್ಲಿ ಮನ್ ಕಿ ಬಾತ್ ಆಲಿಸಿ ಬಸವೇಶ್ವರ ದೇವಸ್ಥಾನ ಮೈದಾನದಲ್ಲಿ ತೆಂಗಿನ ಸಸಿ ನೆಟ್ಟು ರೈತರಿಗೆ ವಿತರಿಸಿದರು
ಬಿಜೆಪಿ ಉಪಾಧ್ಯಕ್ಷ ಎಲೆಮುದನಹಳ್ಳಿ ಆನಂದ್, ರೈತ ಮೋರ್ಚಾ ಅಧ್ಯಕ್ಷ ಮೋಹನ್, ಯಜಮಾನ್ ರಾಜಣ್ಣ, ಛೇರ್ಮನ್ ತಮ್ಮಯ್ಯಣ್ಣ, ಸೋಮಶೇಖರ್, ನಂಜಪ್ಪ , ಮಂಜುನಾಥ್, ಹರೀಶ್, ಮಹೇಂದ್ರ, ಆನಂದ, ಚಂದನ್, ಶಿವಣ್ಣ, ನಂದೀಶ್, ತಮ್ಮಯ್ಯಶೆಟ್ಟಿ ಇನ್ನಿತರರಿದ್ದರು.