ಜಿಲ್ಲೆ

ಮತ್ತೆ ನರೇಂದ್ರ ಮೋದಿ ಪ್ರಧಾನಿ

ಅವಿನಾಶ್ ಜೈನಹಳ್ಳಿ

ಮೈಸೂರು: ದೇಶದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದು, ಮತ್ತೊಮ್ಮೆ ನರೇಂದ್ರ ಮೋದಿ ಅವರೇ ಪ್ರಧಾನಿ ಆಗುತ್ತಾರೆ. ಎಲ್ಲವನ್ನೂ ತಾಳ್ಮೆಯಿಂದ ಕಾದು ನೋಡಿ ಎಂದು ಮೈಸೂರು-ಕೊಡಗು ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನವದೆಹಲಿಗೆ ಬರುವಂತೆ ಈಗಾಗಲೇ ಆಹ್ವಾನ ಬಂದಿದೆ. ನವದೆಹಲಿಗೆ ತೆರಳಿ ಪ್ರಮಾಣ ವಚನ ಸ್ವೀಕರಿಸುವೆ. ಎನ್‌ಡಿಎ ಹಾಗೂ ಐಎನ್‌ಡಿಐಎ ಪ್ರತ್ಯೇಕ ಸಭೆಗಳ ವಿಚಾರ, ಯಾವುದೇ ಸಭೆ ನಡೆದರೂ ಅಂತಿಮವಾಗಿ ಎನ್‌ಡಿಎ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದರು.

ಮೈಸೂರಿನಲ್ಲಿ ನನ್ನ ಗೆಲುವಿಗೆ ಜನರೇ ಕಾರಣ. ಮತದಾರರು ನನ್ನನ್ನು ಬೆಂಬಲಿಸದಿದ್ದರೆ ಕಷ್ಟವಾಗುತ್ತಿತ್ತು. ನಾನು ಇಷ್ಟೊಂದು ದೊಡ್ಡ ಪ್ರಮಾಣದ ಲೀಡ್ ಕೂಡ ಊಹಿಸಿರಲಿಲ್ಲ. ನನ್ನ ಕಾರ್ಯಕರ್ತರು, ಹಿತೈಷಿಗಳ ಜತೆಗೆ ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಈ ಕುರಿತು ಅವಲೋಕನ, ಸಭೆಗಳು ನಡೆಯುತ್ತಿವೆ. ಎಲ್ಲಿ ಬಿಜೆಪಿ ಎಡವಿದೆ ಎಂಬುದರ ಪರಾಮರ್ಶೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಂಡು ಹೆಚ್ಚು ಸಂಘಟನೆ ಮಾಡಬೇಕಿದೆ. ಮೈಸೂರಿನ ಅಭಿವೃದ್ಧಿಗೆ ನನ್ನದೇ ಆದಂತಹ ಕಲ್ಪನೆಗಳಿವೆ. ಮೈಸೂರಿನ ಪ್ರಗತಿಗೆ ನಾನು ಶ್ರಮಿಸುವೆ ಎಂದು ಭರವಸೆ ನೀಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಾದಿಯಲ್ಲೇ ನಾನು ನಡೆಯುವೆ. ಜೂನ್ 4 ನನ್ನ ಮುತ್ತಜ್ಜನ ಜನ್ಮದಿನವಾಗಿತ್ತು. ಕಾಕತಾಳೀಯ ಎಂಬಂತೆ ನಾಲ್ವಡಿ ಅವರ ಜನ್ಮ ದಿನದಂದೇ ನನ್ನ ಗೆಲುವಾಯಿತು. ಅವರೇ ನನಗೆ ಆದರ್ಶ ಹಾಗೂ ಮಾರ್ಗದರ್ಶಕರು ಎಂದರು.

ಪರಕಾಲ ಮಠದ ಶ್ರೀಗಳ ಭೇಟಿ
ಸಂಸದರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಯದುವಂಶದ ರಾಜಗುರುಗಳಾದ ಪರಕಾಲ ಮಠದ ಶ್ರೀಗಳನ್ನು ಗುರುವಾರ ಭೇಟಿ ಮಾಡಿದರು. ಜಗನ್ಮೋಹನ ಅರಮನೆ ಸಮೀಪ ಇರುವ ಮಠಕ್ಕೆ ಭೇಟಿ ನೀಡಿ ರಾಜಗುರುಗಳ ಆಶೀರ್ವಾದ ಪಡೆದರು. ಅರಮನೆಯ ಪ್ರತಿ ಕಾರ್ಯದಲ್ಲೂ ಪರಕಾಲ ಮಠದ ಉಪಸ್ಥಿತಿ ಇರುತ್ತದೆ. ಅವರ ಉಪಸ್ಥಿತಿಯಲ್ಲಿಯೇ ಅರಮನೆ ಕಾರ್ಯವೈಖರಿಗಳು ಕಾರ್ಯಾರಂಭ ಮಾಡುತ್ತವೆ.