ನರೇಗಲ್ಲ/ಗಜೇಂದ್ರಗಡ: ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿ ಗಜೇಂದ್ರಗಡ ಪುರಸಭೆ ಹಾಗೂ ನರೇಗಲ್ಲ ಪಟ್ಟಣ ಪಂಚಾಯಿತಿ ‘ಕೈ’ ವಶ ಆಗುವಂತೆ ನೋಡಿಕೊಂಡ ಬಂಡಾಯ ಸದಸ್ಯರ ನೆತ್ತಿ ಮೇಲೆ ಈಗ ವಿಪ್ ಉಲ್ಲಂಘನೆಯ ತೂಗುಗತ್ತಿ ನೇತಾಡುತ್ತಿದೆ. ಈ ಎರಡೂ ಸ್ಥಳೀಯ ಸಂಸ್ಥೆಗಳಲ್ಲಿ ವಿಪ್ ಉಲ್ಲಂಘಿಸಿದ ಸದಸ್ಯರ ಸದಸ್ಯತ್ವ ರದ್ದು ಮಾಡುವಂತೆ ಬಿಜೆಪಿ ಜಿಲ್ಲಾಧಿಕಾರಿ ನ್ಯಾಯಾಲಯದ ಕದ ತಟ್ಟಿದೆ.
ನರೇಗಲ್ಲ ಪ.ಪಂ: ಇಲ್ಲಿನ ಪಟ್ಟಣ ಪಂಚಾಯಿತಿಯ ಅಧಿಕಾರ ಹಿಡಿದ ಅಧ್ಯಕ್ಷ- ಉಪಾಧ್ಯಕ್ಷ ಸೇರಿ 6 ಸದಸ್ಯರಿಗೆ ಈಗ ಕಾನೂನು ತೊಡಕು ಎದುರಾಗಿದೆ. ‘ಆರು ಜನರ ಸದಸ್ಯತ್ವ ರದ್ದು ಮಾಡಿ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ. ಜ. 2ರಂದು ಪ್ರಕರಣದ ವಿಚಾರಣೆ ನಿಗದಿಯಾಗಿದೆ.
ನರೇಗಲ್ಲ ಪಟ್ಟಣ ಪಂಚಾಯಿತಿಯ 2ನೇ ಅವಧಿಗಾಗಿ ಸೆ. 2ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯ ಎದ್ದು ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಸ್ಥಾನಕ್ಕೇರಿದ 15ನೇ ವಾರ್ಡಿನ ಬಿಜೆಪಿ ಸದಸ್ಯ ಫಕೀರಪ್ಪ ಮಳ್ಳಿ ಹಾಗೂ ಉಪಾಧ್ಯಕ್ಷ, 17ನೇ ವಾರ್ಡಿನ ಬಿಜೆಪಿ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ, ಸದಸ್ಯರಾದ 6ನೇ ವಾರ್ಡಿನ ಸದಸ್ಯೆ ವಿಜಯಲಕ್ಷ್ಮೀ ಚಲವಾದಿ, 12ನೇ ವಾರ್ಡಿನ ಮಲ್ಲಿಕಸಾಬ್ ರೋಣದ, 13ನೇ ವಾರ್ಡಿನ ಈರಪ್ಪ ಜೋಗಿ, 14ನೇ ವಾರ್ಡಿನ ಫಕೀರಪ್ಪ ಬಂಬ್ಲಾಪುರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸದಸ್ಯತ್ವ ರದ್ದು ಪಡಿಸುವಂತೆ ಪ್ರಕರಣ ದಾಖಲಿಸಲಾಗಿದೆ.
ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ನೆಮ್ಮದಿಯಿಂದ ಅಧಿಕಾರಕ್ಕೇರಿದ ಆರು ಸದಸ್ಯರ ನೆಮ್ಮದಿಗೆ ಭಂಗ ಉಂಟಾಗಿದೆ. ವಿಚಾರಣೆಗೆ ಖುದ್ದಾಗಿ ಅಥವಾ ನ್ಯಾಯವಾದಿಗಳ ಮೂಲಕ ಹಾಜರಾಗಬೇಕು, ಇಲ್ಲದಿದ್ದರೆ ಅರ್ಹತೆಗಳ ಆಧಾರದ ಮೇಲೆ ನಿಖಾಲಿ ಮಾಡಲಾಗುವುದು ಎಂದು ಡಿ.19ರಂದು ಹೊರಡಿಸಲಾದ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ಬಿಜೆಪಿಯ ಆರು ಸದಸ್ಯರು ಸೆ.1ರವರೆಗೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಯಾರ ಸಂಪರ್ಕಕ್ಕೆ ಸಿಗದಂತಿದ್ದರು. ಅಂದು ರಾತ್ರಿ ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ ನೇತೃತ್ವದಲ್ಲಿ ಬಿಜೆಪಿಯ ಆರು ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿತ್ತು. ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಅಧಿಕಾರಕ್ಕೇರಿದವರು ಈಗ ಪ್ರಕರಣವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.
ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ತೋಟಪ್ಪ ಕಡಗದ ಮಾತನಾಡಿ, ಬಿಜೆಪಿ ಪಕ್ಷದ ಚಿಹ್ನೆಯ ಮೇಲೆ ಆರಿಸಿ ಬಂದಿರುವ 6 ಸದಸ್ಯರು, ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಾರೆ. ಆಧಾರ ಸಹಿತ ನಾವು ನ್ಯಾಯಾಲಯಕ್ಕೆ ಹೋಗಿದ್ದೇವೆ. ಪಕ್ಷಾಂತರ ನಿಷೇಧ ಕಾನೂನಿನಂತೆ ತಪ್ಪಿತಸ್ಥರು ತಕ್ಕ ಶಿಕ್ಷಗೆ ಒಳಗಾಗಬೇಕಾಗುತ್ತದೆ ಎಂದರು. ಈ ಕುರಿತು ಪ್ರತಿಕ್ರಿಯಿಸಿದ ಪ.ಪಂ. ಅಧ್ಯಕ್ಷ ಫಕೀರಪ್ಪ ಮಳ್ಳಿ, ‘ನಮಗೆ ಇನ್ನೂ ನೋಟಿಸ್ ತಲುಪಿಲ್ಲ. ಅದರಲ್ಲೇನಿದೆ ಎನ್ನುವುದು ತಿಳಿದಿಲ್ಲ’ ಎಂದರು.
ಏಳು ಬಂಡಾಯಗಾರರಿಗೆ ಪೀಕಲಾಟ
ಗಜೇಂದ್ರಗಡ: ಬಂಡಾಯದ ಬಾವುಟ ಹಾರಿಸಿ ಪುರಸಭೆ ಅಧಿಕಾರದ ಗದ್ದುಗೆ ಹಿಡಿದ ಅಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಚೇರ್ಮನ್ ಸೇರಿ ಇತರೆ ಐವರು ಸದಸ್ಯರ ಸದಸ್ಯತ್ವಕ್ಕೂ ಈಗ ಕುತ್ತು ಬಂದಿದೆ. ಪುರಸಭೆ 2ನೇ ಅವಧಿಗಾಗಿ ಸೆ.3ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಸ್ಥಾನಕ್ಕೇರಿದ 19ನೇ ವಾರ್ಡಿನ ಸುಭಾಸ ಮ್ಯಾಗೇರಿ, ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ 18ನೇ ವಾರ್ಡಿನ ಮುದಿಯಪ್ಪ ಮುಧೋಳ, 5ನೇ ವಾರ್ಡಿನ ವಿಜಯಾ ಮಳಗಿ, 8ನೇ ವಾರ್ಡಿನ ದಾಕ್ಷಾಯಿಣಿ ಚೋಳಿನ, 9ನೇ ವಾರ್ಡಿನ ಕೌಸರಬಾನು ಹುನಗುಂದ, 18 ನೇ ವಾಡಿನ ಮುದಿಯಪ್ಪ ಮುಧೋಳ, 20 ನೇ ವಾಡಿನ ಶರಣಪ್ಪ ಉಪ್ಪಿನಬೆಟಗೇರಿ, 22ನೇ ವಾರ್ಡಿನ ಲಕ್ಷ್ಮೀ ಮುಧೋಳ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸದಸ್ಯತ್ವ ರದ್ದು ಪಡಿಸುವಂತೆ ಕೇಸ್ ದಾಖಲಾಗಿದೆ.ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಪೂರ್ವದಲ್ಲಿಯೇ ನಮ್ಮೆಲ್ಲ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದೆವು. ಎಲ್ಲ ಸದಸ್ಯರು ವಿಪ್‌ಗೆ ಸಹಿ ಮಾಡಿದ್ದರೂ ಉಲ್ಲಂಘಿಸಿದ್ದಾರೆ. ಬೇರೆ ಪಕ್ಷದೊಂದಿಗೆ ಶಾಮೀಲಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಹೀಗಾಗಿ 7 ಸದಸ್ಯರ ಸದಸ್ಯತ್ವ ರದ್ದು ಕೋರಿ ದೂರು ದಾಖಲಿಸಲಾಗಿದೆ ಎಂದು ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತು ಕಡಗದ ತಿಳಿಸಿದ್ದಾರೆ.