ನರೇಗಲ್ಲ:ಸ್ವಾತಂತ್ರೃ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಈ ಭಾಗದ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದ ಕೀರ್ತಿ ಹಾಲಕೆರೆಯ ಶ್ರೀ ಅನ್ನದಾನೇಶ್ವರಮಠಕ್ಕೆ ಸಲ್ಲುತ್ತದೆ ಎಂದು ನಂದವಾಡಗಿ-ಆಳಂದ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಹಾಲಕೆರೆ ಶ್ರೀ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಲಿಂ. ಗುರು ಅನ್ನದಾನ ಶಿವಯೋಗಿಗಳ 46ನೇ ಪುಣ್ಯಸ್ಮರಣೋತ್ಸವ ಮತ್ತು ಆಧ್ಯಾತ್ಮ ಪ್ರವಚನ ಮಂಗಲ ಮಹೋತ್ಸವ ಸಮಾರಂಭದ ನೇತೃತ್ವ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಲಿಂ. ಗುರು ಅನ್ನದಾನ ಸ್ವಾಮೀಜಿಗಳು ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ಪ್ರಾರಂಭಿಸುವ ಮೂಲಕ ಬಡ ಮಕ್ಕಳಿಗೆ ಅನ್ನದೊಂದಿಗೆ ಅಕ್ಷರ ಕಲಿಸುತ್ತ ಬಂದಿರುವುದು ಪವಾಡವೇ ಆಗಿದೆ. ಸಮಾಜಕ್ಕಾಗಿ ದುಡಿದು ಮಡಿದವರನ್ನು ಸ್ಮರಿಸುವುದು ಪುಣ್ಯದ ಕೆಲಸ ಎಂದರು.
ನೇರಡಗಂಬ ಪಶ್ಚಿಮಾದ್ರಿ ಸಂಸ್ಥಾನಮಠದ ಪಂಚಮ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ದರೂರು ಸಂಗನಬಸವೇಶ್ವರಮಠದ ಕೊಟ್ಟೂರು ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಚನ್ನಬಸವ ಸ್ವಾಮೀಜಿ, ಗುಳೆದಗುಡ್ಡ ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯರು, ಕುರುಗೋಡು-ನಾಗಲಾಪೂರ ನಿರಂಜನ ದೇವರು, ಸೋಮಸಮುದ್ರದ ಸಿದ್ಧಲಿಂಗ ದೇವರು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇವರು, ಬೂದಗುಂಪ ಸಿದ್ಧೇಶ್ವರ ದೇವರು, ಡಾ. ಬಿ.ಎನ್. ಪಾಟೀಲ, ಹನಮಂತಗೌಡ ಬೆಳ್ಳಿಗನೂರ ಇದ್ದರು. ರತ್ನಮ್ಮ ಧಡೇಸೂರಮಠ, ಐ. ಜ್ಞಾನೇಶ್ವರಿ ನಿರ್ವಹಿಸಿದರು.