ಜಿಲ್ಲೆ

ಅಗತ್ಯದ ಕಾಮಗಾರಿಯ ಮಾಹಿತಿ ಸಲ್ಲಿಸಿ: ತಾಪಂ ಇಒ ಎಂ.ಎಸ್.ವೀಣಾ ಮನವಿ

ಕೆ.ಎನ್.ರಾಘವೇಂದ್ರ

ಮಂಡ್ಯ: ನರೇಗಾ ಯೋಜನೆಯಡಿ ಕಾಮಗಾರಿ ಬೇಡಿಕೆ ಪೆಟ್ಟಿಗೆಯನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿಡಲಾಗಿದೆ. ವೈಯಕ್ತಿಕ ಮತ್ತು ಸಮುದಾಯ ಆಧಾರಿತ ಕಾಮಗಾರಿಗಳ ಮಾಹಿತಿಯನ್ನು ಅಲ್ಲಿಗೆ ಹಾಕಬಹುದಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಎಂ.ಎಸ್.ವೀಣಾ ಹೇಳಿದರು.

ನಗರದ ತಾಪಂ ಕಚೇರಿ ಆವರಣದಲ್ಲಿ ನರೇಗಾ ನಡಿಗೆ ಸುಸ್ಥಿರತೆ ಕಡೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನರೇಗಾ ಯೋಜನೆಯ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಮಂಡ್ಯ ತಾಲೂಕಿನ 46 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಮನೆ ಮನೆಗೆ ಜಾಗೃತಿ, ಕರಪತ್ರ ಹಂಚಿಕೆ ಮಾಡಲಾಗುವುದು ಎಂದರು.

ಎಲ್ಲ ಗ್ರಾಮದಲ್ಲಿ ಪ್ರತಿಯೊಂದು ಮನೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ದೊರೆಯುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಸೌಲಭ್ಯ, ಇರಬೇಕಾದ ಆರ್ಹತೆ, ಯೋಜನೆಯಡಿ ದೊರೆಯುವ ಕೂಲಿಯ ಮೊತ್ತ, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣದ ಮಾಹಿತಿ ನೀಡಲಾಗುವುದು. ಜತೆಗೆ ಕಾಮಗಾರಿ ಬೇಡಿಕೆ ಪಟ್ಟಿಯನ್ನು ಸಂಗ್ರಹಿಸಲಾಗುವುದು. ಈ ಅಭಿಯಾನದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ) ಮಲ್ಲೇಶ್, ಪಿಡಿಒ, ನರೇಗಾ ಯೋಜನೆ ಸಿಬ್ಬಂದಿಗಳಿದ್ದರು.