ನರೇಗಾ ಯೋಜನೆಯಡಿ ಮುಳ್ಳೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ಶಾಸಕ ಯಾದವಾಡ ಪರಿಶೀಲಿಸಿದರು. ರೇಣಪ್ಪ ಸೋಮಗೊಂಡ, ಮುರಳೀಧರ ದೇಶಪಾಂಡೆ, ಎಸ್.ಎಫ್.ಬೆಳವಟಗಿ, ಮಾಲತೇಶ ದಾಸಪ್ಪನವರ, ರಾಯಪ್ಪ ಹೊಲಿಕಟ್ಟಿ, ಬಾಬು ಹೆಬ್ಬಳ್ಳಿ ಮತ್ತಿತರರು ಇದ್ದರು. 
ಜಿಲ್ಲೆ

ನರೇಗಾ ಯೋಜನೆಯ ಲಾಭ ಪಡೆಯಿರಿ

ರಾಮದುರ್ಗ: ಬಡ ಕುಟುಂಬಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ನೀಡಲಾಗುತ್ತಿದೆ. ಸದುಪಯೋಗ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.

ಗುರುವಾರ ತಾಲೂಕಿನ ಮುಳ್ಳೂರ ಗ್ರಾಪಂ ವ್ಯಾಪ್ತಿಯ ಮುದೇನಕೊಪ್ಪ ಗ್ರಾಮದ ರೈತರ ಜಮೀನಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಬದು ನಿರ್ಮಾಣ ಕಾಮಗಾರಿ ಪರಿಶೀಲಿಸಿ ನಂತರ ಸ್ಥಳದಲ್ಲಿದ್ದ ಕಾರ್ಮಿಕರಿಗೆ ಮಾಸ್ಕ್ ವಿತರಿಸಿ ಮಾತನಾಡಿ, ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುವುದು. ಕಾರ್ಮಿಕರು ದೈಹಿಕ ಅಂತರ ಕಾಪಾಡಿಕೊಂಡು ಕಾಮಗಾರಿ ನಿರ್ವಹಿಸಬೇಕು. ಅಧಿಕಾರಿಗಳು ಸಹ ಈ ಸಂಬಂಧ ಎಚ್ಚರ ವಹಿಸಬೇಕು ಎಂದರು.

ನಂತರ ಜಾಲಿಕಟ್ಟಿ ಗ್ರಾಮದ ಮುಖ್ಯ ಕಾಲುವೆಯ ಹೂಳೆತ್ತುವ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಭಿಯಂತಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ರೇಣಪ್ಪ ಸೋಮಗೊಂಡ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮುರಳೀಧರ ದೇಶಪಾಂಡೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಫ್.ಬೆಳವಟಗಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಲತೇಶ ದಾಸಪ್ಪನವರ, ರಾಯಪ್ಪ ಹೊಲಿಕಟ್ಟಿ, ಬಾಬು ಹೆಬ್ಬಳ್ಳಿ ಇದ್ದರು.

ನರೇಗಾ ಯೋಜನೆಯಡಿ ರೈತರು ಹೊಲಗಳಲ್ಲಿ ಬದು ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಸಹಾಯಧನ ನೀಡುತ್ತಿದೆ. ಅಗತ್ಯ ದಾಖಲೆಗಳೊಂದಿಗೆ ರೈತರು ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬೇಕು. ಅಧಿಕಾರಿಗಳುಸಹ ರೈತರಿಗೆ ಯೋಜನೆಯ ಜಾಗೃತಿ ಮೂಡಿಸಬೇಕು.| ಮಹಾದೇವಪ್ಪ ಯಾದವಾಡ ಶಾಸಕ