ಮುಂಡರಗಿ: ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕ್ಯೂಆರ್ ಕೋಡ್ ಸ್ಕ್ಯಾನ್ ವಿಧಾನದ ಮೂಲಕ ಅಂಗೈಯಲ್ಲಿ ಮಾಹಿತಿಯನ್ನು ತಿಳಿಯುವುದರ ಜತೆಗೆ ಜನರ ಬಳಿಗೆ ಯೋಜನೆಯನ್ನು ಅತಿಸರಳವಾಗಿ ತಲುಪಿಸಲಾಗುತ್ತಿದೆ ಎಂದು ತಾ.ಪಂ.ಇಒ ವಿಶ್ವನಾಥ ಹೊಸಮನಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಕಾರ್ಯಕ್ರಮದ ಮೂಲಕ ತಾಲೂಕಿನ 19 ಗ್ರಾ.ಪಂ.ಗಳ ರೈತರು, ಸಾರ್ವಜನಿಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಕಾಮಗಾರಿಗಳ ಬೇಡಿಕೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಈಗಾಗಲೇ ಎಲ್ಲ ಗ್ರಾ.ಪಂ.ಗಳಿಗೂ ಕ್ಯೂಆರ್ ಕೋಡ್ ಉಳ್ಳ ಮಾಹಿತಿ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಗಿದೆ. ಸ್ವಗ್ರಾಮದಲ್ಲಿಯೇ ವರ್ಷಕ್ಕೆ 100 ದಿನಗಳ ಕೆಲಸ ನೀಡಿ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡುವುದರೊಂದಿಗೆ ಫಲಾನುಭವಿಗಳ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳಿಗೂ ಒತ್ತು ನೀಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಕ್ಯೂಆರ್ ಕೋಡ್ ಒಳಗೊಂಡ ಮಾಹಿತಿ ಪತ್ರಗಳನ್ನು ಪ್ರಚಾರಕ್ಕಾಗಿ ವಿತರಿಸಿದೆ. ತಾಲೂಕಿನ ಆಯಾ ಪಂಚಾಯತಿ ವ್ಯಾಪ್ತಿಯ ಜನರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವೈಯುಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬಹುದಾಗಿದೆ.
ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಅರಣ್ಯ, ರೇಷ್ಮೆ ಮತ್ತು ಕೃಷಿಇಲಾಖೆ ಸಹಯೋಗದಲ್ಲಿ ನಿರಂತರ ಆದಾಯ ನೀಡುವ ಬೆಳೆಗಳನ್ನು ಬೆಳೆಯಬಹುದಾಗಿದೆ. ಬಹುವಾರ್ಷಿಕ ಬೆಳೆಗಳಾದ ಶ್ರೀಗಂಧ, ಹೆಬ್ಬೇವು, ಹುಣಸೆ, ಮಾವು, ವೀಳ್ಯದೆಲೆ, ಕರಿಬೇವು, ಡ್ರಾಗನ್ ಫ್ರೂಟ್, ನುಗ್ಗೆ, ಪೇರಲ, ಸೀತಾಫಲ, ನೆಲ್ಲಿ, ಸೀಬೆ, ಹೂವಿನ ಬೆಳೆಗಳಾದ ಮಲ್ಲಿಗೆ, ಗುಲಾಬಿ ಇನ್ನಿತರ ಬೆಳೆ ಬೆಳೆಯಲು ಆರ್ಥಿಕ ಸಹಾಯ ನೀಡಲಾಗುತ್ತದೆ. ಅಲ್ಲದೆ ಕೋಳಿ ಶೆಡ್, ಕುರಿ ಶೆಡ್ ನಿರ್ಮಾಣಕ್ಕೂ ಸಹಾಯಧನ ನೀಡಲಾಗುತ್ತಿದೆ. ಅರ್ಹ ರೈತರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.