ಶ್ರೀರಂಗಪಟ್ಟಣ: ನರೇಗಾ ಕೂಲಿ ಕಾರ್ಮಿಕರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಕಡೆ ಹೆಚ್ಚು ಗಮನಹರಿಸಬೇಕು ಎಂದು ತಾಲೂಕು ಪಂಚಾಯಿತಿ ಇಒ ವೀಣಾ ರಾಜೇಗೌಡ ಕಿವಿಮಾತು ಹೇಳಿದರು.
ತಾಲೂಕಿನ ಕೆ.ಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆರೋಗ್ಯ ಇಲಾಖೆ ಕೆಎಚ್‌ಪಿಟಿ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆಯೋಜಿಸಿದ್ದ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯಾವುದೇ ರೀತಿಯ ಮಾನಸಿಕ ರೋಗಕ್ಕೆ ಮಾನಸಿಕ ತಜ್ಞರ ಬಳಿ ಸೂಕ್ತ ಚಿಕಿತ್ಸೆ ಪಡೆದು ಆಪ್ತ ಸಮಾಲೋಚನೆ ಕೊಡಿಸುವುದರ ಮೂಲಕ ಕಾಯಿಲೆಯನ್ನು ಗುಣಪಡಿಸಬಹುದಾಗಿದೆ. ಮನೋರೋಗ ಎಂಬ ಕಳಂಕ ಇನ್ನೂ ಸಮಾಜದಲ್ಲಿ ಆಳವಾಗಿದೆ. ಇದನ್ನು ಹೋಗಲಾಡಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಮಾನಸಿಕ ಮನೋತಜ್ಞ ಮಹಮ್ಮದ್ ಸುಹೇಲ್ ಮಾತನಾಡಿ, ಮೇ.30ರವರೆಗೆ ವಿಶ್ವ ಸ್ಕಿಜೋಪ್ರೀನಿಯ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಸ್ಕಿಜೋಪ್ರಿನಿಯಾ 15 ರಿಂದ 35 ವರ್ಷದ ವಯೋಮಾನದವರಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಮಾನಸಿಕ ರೋಗವಾಗಿದ್ದು, ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಮಿದುಳಿನ ನರ ಕೋಶಗಳಲ್ಲಿ ಡೋಪಮಿನ್ ವ್ಯವಸ್ಥೆ ಏರುಪೇರಾಗುವುದೇ ಈ ರೋಗ ಲಕ್ಷಣಗಳಿಗೆ ಕಾರಣವಾಗಿದೆ ಎಂದು ವಿವರಿಸಿದರು.
ವ್ಯಕ್ತಿಯ ಮಾತು, ವರ್ತನೆ ಏರುಪೇರು, ಅಸಂಬದ್ಧ ಮಾತುಗಳು, ವಿವೇಚನಾ ರಹಿತ ಆಲೋಚನೆ, ಯಾರೊಂದಿಗೂ ಬೆರೆಯದೇ ಇರುವದು. ಸದಾ ಸಂಶಯ ವ್ಯಕ್ತಪಡಿಸುವದು ಇವು ಸ್ಕೀಜೋಪ್ರೀನಿಯ ಮಾನಸಿಕ ರೋಗದ ಲಕ್ಷಣಗಳಾಗಿದ್ದು, ಇಂತಹ ರೋಗಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದೆ. ಜನರು ಮೂಢನಂಬಿಕೆಯಿಂದ ಹೊರಗಡೆ ಬಂದು ತಪ್ಪು ಕಲ್ಪನೆ ಹೋಗಲಾಡಿಸಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಆಪ್ತ ಸಮಾಲೋಚನೆ ಪಡೆದು ಗುಣಮುಖರಾಗಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ಗ್ರಾ.ಪಂ ಸದಸ್ಯ ಅಪ್ಪಾಜಿಗೌಡ, ಉಪಾಧ್ಯಕ್ಷೆ ಸುವರ್ಣ, ನಾಗಮಂಗಲ ತಾ.ಪಂ ಇಒ ಚಂದ್ರಮೌಳಿ, ತಾ.ಪಂ ಸಹಾಯಕ ನಿರ್ದೇಶಕ ರಮೇಶ್, ಪಿಡಿಒ ಆರ್.ಶಿಲ್ಪಾ, ಗ್ರಾ.ಪಂ ಸದಸ್ಯ ನರಸಿಂಹಯ್ಯ, ಕಾರ್ಯದರ್ಶಿ ಸತೀಶ, ಐಇಸಿ ಸಂಯೋಜಕಿ ಸುಮಾ, ಕೆಎಚ್‌ಪಿಟಿ ತಾಲೂಕು ಸಂಯೋಜಕಿ ದರ್ಶಿನಿ, ನರೇಗಾ ಟಿಎಇ ತೇಜಸ್ವಿನಿ, ಸಂಯೋಜಕ ರುದ್ರೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಫಣೀಂದ್ರ, ಸಮುದಾಯ ಆರೋಗ್ಯ ಅಧಿಕಾರಿ ಬಸವರಾಜ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಮತಾ ಇತರರಿದ್ದರು.