ಹನೂರು: ನರೇಗಾ ಯೋಜನೆಯಡಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 68 ಕಾಮಗಾರಿಗಳು ನಡೆದಿದ್ದು, 80.77 ಲಕ್ಷ ರೂ. ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ ಎಂದು ನರೇಗಾ ತಾಲೂಕು ಸಂಯೋಜಕ ನಾರಾಯಣ ತಿಳಿಸಿದರು.
ತಾಲೂಕಿನ ಮಿಣ್ಯಂ ಗ್ರಾಪಂ ವತಿಯಿಂದ ಮಂಗಳವಾರ ಆಯೋಜಿಸಿದ್ದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ 15ನೇ ಹಣಕಾಸು ಯೋಜನೆಯ ಗ್ರಾಮಸಭೆಯಲ್ಲಿ ಮಾತನಾಡಿದರು.
ನರೇಗಾ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಪ್ರತಿ ಕುಟುಂಬವೂ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು, ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಈ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ವಸತಿ ಯೋಜನೆಗೆ ಅನುದಾನ, ದನದ ಕೊಟ್ಟಿಗೆ, ಪೌಷ್ಟಿಕ ಕೈತೊಟ ನಿರ್ಮಾಣ, ಕೃಷಿ ಹೊಂಡ, ಸಿಸಿ ರಸ್ತೆ, ಚರಂಡಿ ನಿರ್ಮಾಣ, ಕೆರೆ, ಕಾಲುವೆ ಅಭಿವೃದ್ಧಿ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ವತಿಯಿಂದ ಬಾಳೆ ಅಂಗಾಂಗ ಕೃಷಿ ಕಾಮಗಾರಿ ಸೇರಿ 68 ಕಾಮಗಾರಿಗಳು ನಡೆದಿದ್ದು, ಕೂಲಿ ವೆಚ್ಚ 52,89,638 ರೂ. ಹಾಗೂ ಸಾಮಾಗ್ರಿ ವೆಚ್ಚ 27,88,051 ರೂ. ಸೇರಿದಂತೆ 80,77,689 ರೂ. ಅನುದಾನ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಖರ್ಚು ವೆಚ್ಚದ ಬಗ್ಗೆ ಮಾಹಿತಿ ತಿಳಿಸಲಾಯಿತು. ಗ್ರಾಪಂ ಅಧ್ಯಕ್ಷೆ ಚಂದ್ರಮತಿ, ಸದಸ್ಯರಾದ ಬಸವಣ್ಣ, ರಾಮಕೃಷ್ಣ, ಮಾದೇವ, ಪ್ರಭುಸ್ವಾಮಿ, ಸರೋಜಮ್ಮ, ರಾಜಮ್ಮ, ಪಿಡಿಒ ಗಂಗಾಧರ್ ಹಾಗೂ ಗ್ರಾಮಸ್ಥರು ಇದ್ದರು.