ಜಿಲ್ಲೆ

ನರೇಗಾದಡಿ ದುಡಿಯೋಣ ಬಾ ಅಭಿಯಾನ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯ ಗ್ರಾಮೀಣರು ಉದ್ಯೋಗ ಹುಡುಕಿಕೊಂಡು ವಲಸೆ ಹೋಗುವುದನ್ನು ತಪ್ಪಿಸಲು ಜಿಲ್ಲಾ ಪಂಚಾಯಿತಿ ವತಿಯಿಂದ ಜಾರಿಗೊಳಿಸಿರುವ ದುಡಿಯೋಣ ಬಾ ಅಭಿಯಾನ ನರೇಗಾ ಯೋಜನೆಯಡಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಕೆಲಸ ನೀಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದ್ದು, ಪ್ರಾಯೋಗಿಕವಾಗಿ ಒಂದು ತಿಂಗಳ ಅಭಿಯಾನ ಜಾರಿಯಾಗಿದೆ. ಬೇಸಿಗೆ ಆರಂಭದಿಂದಲೇ ಸಾಮಾನ್ಯವಾಗಿ ಗ್ರಾಮೀಣ ಭಾಗದ ಬಡ ರೈತರು, ಕೂಲಿಕಾರ್ಮಿಕರು ನಗರ ಪಟ್ಟಣ ಪ್ರದೇಶಗಳ ಕಡೆಗೆ ಉದ್ಯೋಗ ಹುಡುಕಿಕೊಂಡು ವಲಸೆ ಹೋಗುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಯೋಜನೆ ರೂಪಿಸಿದ್ದು ಸ್ಥಳೀಯವಾಗಿಯೇ 100 ದಿನಗಳ ಕಾಲ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಿಕೊಡುವ ಕಾರ್ಯಕ್ರಮ ರೂಪಿಸಿದ್ದು ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಪ್ರಚಾರ ಮಾಡಲು ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.

ಕೂಲಿಕಾರ್ಮಿಕರಿಗೆ ವರದಾನ: ವಿಶೇಷವಾಗಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಈ ಅಭಿಯಾನ ವರದಾನವಾಗಲಿದೆ, ಜತೆಗೆ ಗ್ರಾಮೀಣ ಭಾಗದಲ್ಲಿನ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಇದು ಬಹಳ ಅನುಕೂಲವಾಗಿದೆ ಆರ್ಥಿಕ ಶಕ್ತಿ ಜತೆಗೆ ಸ್ವಾವಲಂಬನೆ ಜೀವನಕ್ಕೆ ದಾರಿ ಮಾಡಿಕೊಡಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಮಹಿಳಾ ಸಂಘಗಳು ನರ್ಸರಿಗಳನ್ನು ಸ್ಥಾಪನೆ ಮಾಡಿ ವಿವಿಧ ಬಗೆಯ ತಳಿಗಳನ್ನು ಮಾರಾಟ ಮಾಡುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗುತ್ತಿದ್ದಾರೆ ಇಂಥ ಸಂಘದ ಮಹಿಳೆಯರಿಗೆ ನರೇಗಾ ಅಭಿಯಾನ ಮತ್ತಷ್ಟು ಶಕ್ತಿ ತುಂಬಲಿದೆ ಎಂಬುದು ಜಿಪಂ ಅಭಿಮತವಾಗಿದೆ.

ಉದ್ಯೋಗ ಚೀಟಿ ಬೇಕು: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ಥಳೀಯ ಗ್ರಾಮೀಣ ಜನರಿಗೆ ನಿರಂತರ ಕೆಲಸವನ್ನು ಒದಗಿಸಲು ಕಾರ್ಯಕ್ರಮವನ್ನು ರೂಪಿಸಲಾಗಿದ್ದು ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ಉದ್ಯೋಗ ಚೀಟಿಯನ್ನು ಹೊಂದಿರುವ ಸಣ್ಣ ರೈತರು, ಅತಿ ಸಣ್ಣ ರೈತರು ಮತ್ತು ಕೂಲಿಕಾರರು ನರೇಗಾ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದು ನಿರಂತರವಾಗಿ ಅಕುಶಲ ಕೆಲಸವನ್ನು ಒದಗಿಸುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ವ್ಯಾಪಕ ಪ್ರಚಾರ: ದುಡಿಯೋಣ ಬಾ ಅಭಿಯಾನದಡಿ ವ್ಯಾಪಕ ಜನಜಾಗೃತಿ ಮೂಡಿಸಲು ಕರಪತ್ರಗಳ ವಿತರಣೆ ಗ್ರಾಮಮಟ್ಟದಲ್ಲಿ ಮನೆಮನೆ ಭೇಟಿ ಮಹಿಳಾ ಸಂಘದ ಸದಸ್ಯರ ಸಭೆಗಳಲ್ಲಿ ಮಾಹಿತಿ ವಿತರಣೆ, ಆಟೋ, ಸ್ವಚ್ಚತಾ ವಾಹಿನಿ ಮುಖಾಂತರ ಪ್ರಚಾರವನ್ನು ಮಾಡಲಾಗುತ್ತಿದೆ. ನರೇಗಾ ಯೋಜನೆಯಡಿ ನೋಂದಾಯಿತ ಕುಟುಂಬಗಳಿಂದ ಮತ್ತು ಅಕುಶಲ ಕೆಲಸಕ್ಕಾಗಿ ಬೇಡಿಕೆಯನ್ನು ಸ್ವೀಕರಿಸಲು ತಾಲೂಕು ಐಇಸಿ ಸಂಯೋಜಕರು, ಗ್ರಾಮ ಕಾಯಕ ಮಿತ್ರ, ಹಾಗೂ ಬಿಎ್ಟಿ ಕಾಯಕ ಬಂಧು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು (ಎಂಬಿಕೆ ) ರಚಿಸಿ ಮನೆಮನೆ ಭೇಟಿ ಹಾಗೂ ರಾಜ್ಯ ದಿವಸ್ ಆಚರಿಸುವ ಮೂಲಕ ಬೇಡಿಕೆಯನ್ನು ಸಂಗ್ರಹಿಸಿ ಕಾರ್ಯದೇಶವನ್ನು ನೀಡಲಾಗಿದೆ. ಹೊಸದಾಗಿ ಉದ್ಯೋಗ ಚೀಟಿಯನ್ನು ಪಡೆಯುವವರ ಹತ್ತಿರ ಅರ್ಜಿಯನ್ನು ಸ್ವೀಕರಿಸಿ ಉದ್ಯೋಗ ಚೀಟಿಯನ್ನು ನೀಡಲಾಗುತ್ತಿದೆ.

ನಿರಂತರ ಕೆಲಸ: ಕೆಲಸಕ್ಕೆ ಬೇಡಿಕೆ ಸಲ್ಲಿಸಿದ ಕೂಲಿಕಾರರಿಗೆ ನಿರಂತರವಾಗಿ ಕೆಲಸವನ್ನು ಒದಗಿಸಲಾಗುತ್ತಿದೆ. ಬೇಡಿಕೆ ಸಲ್ಲಿಸಿದ ವಿಶೇಷವಾಗಿ ಮಹಿಳೆಯರಿಗೆ ಮತ್ತು ವಿಶೇಷ ಚೇತನರಿಗೆ ಕೆಲಸ ಒದಗಿಸಲು ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೂಲಿ ಕಾರ್ಮಿಕರಿಗೆ ನಿರಂತರ ಕೆಲಸವನ್ನು ಒದಗಿಸುತ್ತಿರುವ ಬಗ್ಗೆ ಪ್ರತಿ ದಿನ ತಾಲೂಕು ಮಟ್ಟದಿಂದ ಮೇಲ್ವಿಚಾರಣೆ ಮಾಡುವುದು ಜತೆಗೆ ಜಿಲ್ಲಾ ಮಟ್ಟದಿಂದ ವಾರಕ್ಕೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ತಿಳಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲೆಯ ಎಲ್ಲ 101 ಗ್ರಾಮ ಪಂಚಾಯಿತಿಗಳಲ್ಲಿ ಮೇ 1 ರಿಂದ ಒಂದು ತಿಂಗಳ ಕಾಲ ಕೂಲಿಕಾರರಿಗೆ 100 ದಿನಗಳ ಕೆಲಸವನ್ನು ಒದಗಿಸಲು ದುಡಿಯೋಣ ಬಾ ಅಭಿಯಾನ ಕೈಗೊಳ್ಳಲಾಗಿದೆ, ಈ ಅಭಿಯಾನದ ಸದ್ಭಳಕೆ ಮಾಡಿಕೊಳ್ಳಬೇಕು, ಈ ಬಗ್ಗೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಪ್ರಚಾರ ಮಾಡುವಂತೆ ಸೂಚನೆ ನೀಡಲಾಗಿದೆ.

ಡಾ.ಕೆ.ಎನ್.ಅನುರಾಧ, ಜಿಪಂ ಸಿಇಒ ಬೆಂಗಳೂರು ಗ್ರಾಮಾಂತರ