ಜಿಲ್ಲೆ

ಪೌರಾಣಿಕ ತಾಣದಲ್ಲಿ ಅಮಲಿನ ಕುರುಹು-ಗೋಕರ್ಣದಲ್ಲಿ 10 ಲಕ್ಷ ರೂ. ಮೌಲ್ಯದ ಚರಸ್‌ ವಶ


ವಿಜಯವಾಣಿ ಸುದ್ದಿಜಾಲ ಗೋಕರ್ಣ:

ಪೌರಾಣಿಕ ಪ್ರವಾಸಿ ತಾಣ ಗೋಕರ್ಣದಲ್ಲಿ ಗುರುವಾರ 10 ಲಕ್ಷ ರೂ.ಅಂದಾಜು ಬೆಲೆಯ ಒಂದೂವರೆ ಕೆಜಿ. ಗೂ ಅಧಿಕ (1648ಗ್ರಾಂ) ಚರಸ್ ವಶಪಡಿಸಿಕೊಂಡಿದ್ದಾರೆ. ಬೇಲೆಹಿತ್ತಲಿನ ತುಳಸು ಹಮ್ಮು ಗೌಡ,ಮೂಲೇಕೇರಿಯ ಶ್ರೀಧರ ಗೌಡ ಮತ್ತು ಮೂಲತಃ ನೇಪಾಳದ ಹಾಲಿ ಕುಡ್ಲೆ ಬೀಚ್ ನಿವಾಸಿ ಸಂತ ಬಹದ್ದೂರ ತಮಂಗ್ ಎನ್ನುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಓಂ ಬೀಚ್ ರಸ್ತೆಯಲ್ಲಿ ಚರಸ್ ಮಾರಾಟಕ್ಕೆ ಹೊಂಚು ಹಾಕುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಚರಸ್ ಮಾದಕ ದ್ರವ್ಯದ ಪಾಕೆಟ್‌ಗಳು,ಒಂದು ದ್ವಿಚಕ್ರ ವಾಹನ ಮತ್ತು 2 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಯಿತು. ಈ ಪೈಕಿ ಆರೋಪಿ ತುಳಸು ಮೇಲೆ ಈಗಾಗಲೆ ಮೂರು ಗಾಂಜಾ ಮಾರಾಟ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರದ ದಾಳಿಯಲ್ಲಿ ಪೊಲೀಸ್ ಇನಸ್ಪೆಕ್ಟರ್ ಮಂಜುನಾಥ ಎಂ.,ಪಿಎಸ್‌ಐಗಳಾದ ಹರೀಶ, ಶಕ್ತಿವೇಲು,ಎಎಸ್‌ಐ ಅರವಿಂದ ಶೆಟ್ಟಿ,ಸಿಬ್ಬಂದಿ ವಸಂತ ನಾಯ್ಕ,ರಾಜೇಶ ನಾಯ್ಕ,ಸಚಿನ್ ನಾಯ್ಕ,ನಾಗರಾಜ ನಾಯ್ಕ,ಜಿ.ಬಿ.ರಾಣೆ,ಕಿರಣಕುಮಾರ,ಗಣೇಶ ದಾಸರ್ ಪಾಲ್ಗೊಂಡಿದ್ದರು. ಘಟನೆ ಸಂಬಂಧ ಎಸ್‌ಪಿ ವಿಷ್ಣುವರ್ಧನ ಮತ್ತು ಭಟ್ಕಳ ಡಿಎಸ್‌ಪಿ ಶ್ರೀಕಾಂತ ಇಲ್ಲಿಗೆ ಭೇಟಿಯಿತ್ತು ಮಾರ್ಗದರ್ಶನ ನೀಡಿದರು. ಗೋರ್ಣದ ಪ್ರವಾಸೋದ್ಯಮ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ.