ಯಳಂದೂರು ತಾಲೂಕಿನ ಯರಿಯೂರು ಗ್ರಾಪಂನ ನೂತನ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಆರ್.ನಾರಾಯಣಸ್ವಾಮಿ ಅವರಿಗೆ ಅಧ್ಯಕ್ಷೆ ದೊಡ್ಡಮ್ಮ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. 
ಜಿಲ್ಲೆ

ಯರಿಯೂರು ಗ್ರಾಪಂ ಉಪಾಧ್ಯಕ್ಷರಾಗಿ ನಾರಾಯಣಸ್ವಾಮಿ ಆಯ್ಕೆ

ಯಳಂದೂರು: ಯರಿಯೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಯರಿಯೂರು ಗ್ರಾಮದ ಎರಡನೇ ವಾರ್ಡ್ ಸದಸ್ಯ ಆರ್.ನಾರಾಯಣಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದ ಈ ಸ್ಥಾನದಲ್ಲಿ ಈ ಹಿಂದೆ ಇದ್ದ ಒಂದನೇ ವಾರ್ಡಿನ ಸದಸ್ಯ ಮಹೇಶ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಈ ಸ್ಥಾನ ಖಾಲಿಯಾಗಿತ್ತು. ಇದಕ್ಕೆ ಚುನಾವಣೆ ನಿಗದಿಯಾಗಿತ್ತು. ಚುನಾವಣಾಧಿಕಾರಿಯಾಗಿದ್ದ ಕೃಷಿ ಇಲಾಖೆಯ ಅಮೃತೇಶ್ವರ್ ಈ ಸ್ಥಾನಕ್ಕೆ ಆರ್.ನಾರಾಯಣಸ್ವಾಮಿ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ನೂತನ ಉಪಾಧ್ಯಕ್ಷ ಆರ್.ನಾರಾಯಣಸ್ವಾಮಿ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಯರಿಯೂರು, ಗಣಿಗನೂರು, ಚಾಮಲಾಪುರ ಗ್ರಾಮಗಳ ಮೂಲ ಸಮಸ್ಯೆಗಳನ್ನು ನಿವಾರಿಸುವಲ್ಲಿ ಗ್ರಾಮಗಳನ್ನು ಶುಚಿಯಾಗಿಟ್ಟುಕೊಳ್ಳುವಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಅಲ್ಲದೆ ಪಂಚಾಯಿತಿಗೆ ಬರುವ ಸರ್ಕಾರದ ಅನುದಾನ ಸಮಪರ್ಕವಾಗಿ ಬಳಸಿಕೊಂಡು ಇದನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸೂಕ್ತ ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.

ಅಧ್ಯಕ್ಷೆ ದೊಡ್ಡಮ್ಮ ಸದಸ್ಯರಾದ ಶೈಲಜಾ, ಲಾವಣ್ಯಾ, ಮಹದೇವಯ್ಯ, ಲಕ್ಷ್ಮೀ, ವೈ.ಎಂ.ಪ್ರವೀಣ್‌ಕುಮಾರ್, ಕಪ್ಪಣ್ಣ, ಎನ್.ಆಶಾ, ಚಿನ್ನಸ್ವಾಮಿ, ಪಿ.ಮಹದೇಶ, ಪದ್ಮಾ, ಸಿ.ರಮೇಶ್, ಜಿ.ಸಿ.ರಾಜೇಶ, ಕೆಂಪಮ್ಮ, ರತ್ನಮ್ಮ, ಶಾಂತಿ, ಚಂದ್ರಮ್ಮ, ಪಿಡಿಒ ಶಿವಕುಮಾರ್ ಸೇರಿದಂತೆ ಅನೇಕರು ಇದ್ದರು.