ಜಿಲ್ಲೆ

ಸ್ವಪಯ ಶಾಸಕರ ವಿರುದ್ಧ ನಾರಾಯಣಸ್ವಾಮಿ ವಾಗ್ದಾಳಿ

ಕೋಲಾರ ಡೆಸ್ಕ್

ಬಂಗಾರಪೇಟೆ: ಸ್ವಪಕ್ಷದ ಶಾಸಕರ ವಿರುದ್ಧವೇ ಸ್ಥಳಿಯ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅವರು ಮತ್ತೊಮ್ಮೆ ಅಸಮಧಾನ ಹೊರಹಾಕಿದ್ದಾರೆ.

ಡಿಸಿಸಿ ಬ್ಯಾಂಕ್​ ಮತ್ತು ಕೋಚಿಮುಲ್​ ಚುನಾವಣೆ, ಹಾಲು ಒಕ್ಕೂಟದ ಡಿಲಿಗೇಟ್​ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಮತ್ತು ಕೆಜಿಎಫ್​ ಶಾಸಕರೊಂದಿಗೆ ಚರ್ಚಿಸಿಲ್ಲ ಎಂದು ಗಂಭೀರ ಆರೋಪ ಮಾಡಿರುವ ಶಾಸಕರು, ಇತ್ತೀಚೆಗೆ ಬೆಂಗಳೂರಿನ ಮೌರ್ಯ ಹೋಟೆಲ್​ನಲ್ಲಿ ನಡೆದ ಸಭೆಗೆ ನಮ್ಮನ್ನೇಕೆ ಆಹ್ವಾನಿಸಿಲ್ಲ ಎಂದು ಪ್ರಶ್ನಿಸಿದರು.

ಶಾಸಕರ ಗೃಹ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಸಮ್ಮುಖದಲ್ಲಿ ಕೋಲಾರ ಶಾಸಕ ಕೊತ್ತೂರ್​ ಮಂಜುನಾಥ್​, ಮಾಲೂರು ಶಾಸಕ ಕೆ.ವೈ.ನಂಜೇಗೌಡ , ಎಂಎಲ್ಸಿಯವರಾದ ಅನಿಲ್​ಕುಮಾರ್​ ಮತ್ತು ನಜೀರ್​ ಅಹ್ಮದ್​ ಅವರು ಇತ್ತೀಚೆಗೆ ಮೌರ್ಯ ಹೋಟೆಲ್​ನಲ್ಲಿ ಸಭೆ ಸೇರಿ ಡಿಸಿಸಿ ಬ್ಯಾಂಕ್​ ಮತ್ತು ಕೋಚಿಮುಲ್​ ಚುನಾವಣೆ ಬಗ್ಗೆ ಚರ್ಚಿಸಲಾಗಿದೆ. ಆದರೆ, ನನ್ನ ಮತ್ತು ಕೆಜಿಎಫ್​ ಶಾಸಕರನ್ನು ಆಹ್ವಾನಿಸದೆ ಕಡೆಗಣಿಸಿದ್ದಾರೆ. ಚುನಾವಣೆ ಸಂಬಂಧವಾಗಿ ನಮ್ಮ ಬಳಿ ಚರ್ಚೆ ಮಾಡದಿರುವುದು ಬೇಸರ ತರಿಸಿದೆ ಎಂದು ಜಿಲ್ಲೆಯ ಸ್ವಪಕ್ಷೀಯ ಶಾಸಕರ ವಿರುದ್ಧ ಗುಡುಗಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್​ ಒಮ್ಮತವಾಗಿದೆ ಎಂದು ಎಂಎಲ್ಸಿ ಅನಿಲ್​ ಕುಮಾರ್​ ತಿಳಿಸಿದ್ದಾರೆ. ಹಾಗಾದರೆ ನನ್ನನ್ನು ಮತ್ತು ಕೆಜಿಎಫ್​ ಶಾಸಕಿ ರೂಪಕಲಾ ಅವರನ್ನುಆಹ್ವಾನಿಸಬೇಕಿತ್ತಲ್ವೆ? ಪ್ರಶ್ನಿಸಿದರು.

ಕೋಮುಲ್​ ಡಿಲಿಗೇಟ್​ ವಿಚಾರದಲ್ಲಿ ಯಾವುದೇ ಅಧಿಕಾರಿ ನಮ್ಮನ್ನು ಪರಿಗಣಿಸಿಲ್ಲ. ಡಿಲಿಮಿಟೇಷನ್​ ವಿಚಾರದಲ್ಲಿ ಎಂಎಲ್ಸಿ ಅನಿಲ್​ ಕುಮಾರ್​ ಅವರು ಹೇಳಿಕೆ ನೀಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಅವರ ಹೇಳಿಕೆ ಶುದ್ಧ ಸುಳ್ಳು. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅನಿಲ್​ಕುಮಾರ್​, ನಂಜೇಗೌಡ, ಕೊತ್ತೂರ್​ ಮಂಜುನಾಥ್​ ಅವರದ್ದೊಂದೇ ಅಜೆಂಡಾ.ಯಾವುದೇ ಕಾರಣಕ್ಕೂ ಕೋಮುಲ್​ಗೆ ಎಸ್​.ಎನ್​.ನಾರಾಯಣಸ್ವಾಮಿ ಎಂಟ್ರಿ ಆಗಬಾರದು ಅನ್ನೋ ಅಜೆಂಡಾದಲ್ಲಿ ಅಧಿಕಾರಿಗಳನ್ನು ಇಟ್ಟುಕೊಂಡು ಅವರ ಮುಖಾಂತರ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲೆಯಲ್ಲಿ 915 ವಿಶೇಷ ಪ್ರತಿನಿಧಿಗಳಿದ್ದು, ನನಗೆ ಬಂದಿರುವ ಮಾಹಿತಿಯಂತೆ ಸುಮಾರು 15 ರಿಂದ 16 ಸಂಘಗಳ ಆಡಳಿತಾವಧಿ ಮುಗಿದಿದ್ದರೂ ಪ್ರಭಾವ ಬಳಿಸಿ ಪ್ರತಿನಿಧಿ ಆಯ್ಕೆ ಮಾಡಲಾಗಿದೆ. ಬಂಗಾರಪೇಟೆ ತಾಲೂಕಿನಲ್ಲಿ ಮಲ್ಲಿಯನ್​ ಗುರ್ಕಿ ಮತ್ತು ಎಸ್​.ಮಾದಮಂಗಲ ಸಂಘಗಳಿಗೆ ಆಡಳಿತಾಧಿಕಾರಿ ನೇಮಕವಾಗಿದ್ದರೂ ಸಹ ಕೋಮುಲ್​ ಎಂ.ಡಿ.ಗೋಪಾಲಮೂರ್ತಿ ಮತ್ತು ಡಿಆರ್​ ಜೋಷಿ ಅವರು ಡಿಲಿಗೇಟ್​ ನಮೂನೆ ಕೊಟ್ಟಿರುವುದು ಸರಿಯೇ ಎಂದು ಪ್ರಶ್ನಸಿಸಿದರು.

ಡಿಸಿಸಿ ಬ್ಯಾಂಕ್​ ಮತ್ತು ಕೋಚಿಮುಲ್​ ಚುನಾವಣೆ ಬಗ್ಗೆ ಹಸ್ತಕ್ಷೇಪ ಮಾಡುತ್ತಿರುವುದು ಒಳ್ಳೆಯದಲ್ಲ. ಗೋವಿಂದಗೌಡ ಡಿಸಿಸಿ ಬ್ಯಾಂಕ್​ ಅಧ್ಯಕ್ಷರಾಗಿದ್ದಾಗ ಮಹಿಳಾ ಸಂಘಗಳಿಗೆ ಸಾಲ ನೀಡುತ್ತಿದ್ದರು. ಒಂದುವರೆ ವರ್ಷ ಬ್ಯಾಂಕ್​ಗೆ ಚುನಾವಣೆ ನಡೆಸಬಾರದೆಂದು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗುಂಪು ಮಾಡಿಕೊಂಡು ಪಿತೂರಿ ನಡೆಸುತ್ತಿದ್ದಾರೆ. ಅಂತಿಮವಾಗಿ ನ್ಯಾಯಾಲಯ ಚುನಾವಣೆ ನಡೆಸಬೇಕು ಎಂದು ಆದೇಶ ಮಾಡಿರುವುದರಿಂದ ಚುನಾವಣೆ ನಡೆಯುತ್ತಿದೆ ಎಂದರು.