ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕಚೇರಿ ಕಂದಾಯ ಶಾಖೆ ಶಿರಸ್ತೇದಾರ್ ಎಂ.ಸಿ.ಹೇಮAತ್ ಉದ್ಘಾಟಿಸಿದರು. ತಿಪ್ಪೇರುದ್ರಪ್ಪ, ಡಾ.ರಮೇಶ್ ಮತ್ತಿತರರಿದ್ದರು. 
ಜಿಲ್ಲೆ

ಅಸ್ಪಶ್ಯತೆ ವಿರುದ್ಧ ಹೋರಾಡಿದ ನಾರಾಯಣಗುರು

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಮನುಕುಲ ಕುಟುಂಬಕ್ಕೆ ಸಾರಿದವರು ಬ್ರಹ್ಮ ಶ್ರೀ ನಾರಾಯಣ ಗುರು ಎಂದು ಸಾಹಿತಿ ತಿಪ್ಪೇರುದ್ರಪ್ಪ ತಿಳಿಸಿದರು.

ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಮಾನವ ಸಂದೇಶವನ್ನು ಕೇರಳದಿಂದ ಪ್ರಾರಂಭ ಮಾಡಿ ದೇಶದೆಲ್ಲೆಡೆ ಹಬ್ಬಿಸಿದವರು ನಾರಾಯಣಗುರುಗಳು ಎಂದರು.
ಯೂರೋಪಿಯನ್ನರು ವಸಾಹತು ಸ್ಥಾಪಿಸಿ ನಮ್ಮನ್ನು ಗುಲಾಮರನ್ನಾಗಿ ಮಾಡಿದ್ದರು. ರಾಜಕೀಯ ರಂಗದ ಗೋಳು ಹೇಳತೀರದಾಗಿತ್ತು. ಇದೇ ಕಾಲದಲ್ಲಿ ಸಾಮಾಜಿಕ ಸ್ಥಿತಿ ಇನ್ನೂ ನೋವಿನ ಸಂಗತಿಯಾಗಿತ್ತು. ಆ ಕಾಲದಲ್ಲಿ ಜಾತಿಯಲ್ಲಿ ಹಿಂದುಳಿದವರನ್ನು ಶೋಷಣೆ ಮಾಡಲಾಗುತ್ತಿತ್ತು. ಕೇರಳದ ಬಹುಸಂಖ್ಯಾತ ಈಳವ ಜನಾಂಗ ಕೂಡ ಅಸ್ಪಶ್ಯ ವರ್ಗಕ್ಕೆ ಸೇರಿತ್ತು. ಹೀಗಾಗಿ ಅವರಿಗೂ ದೇವಾಲಯದಲ್ಲಿ ಪ್ರವೇಶವಿರಲಿಲ್ಲ. ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ನಡೆಯುವಂತಿರಲಿಲ್ಲ. ಮಹಿಳೆಯರು ಕುಪ್ಪಸ ತೊಡುವಂತಿರಲಿಲ್ಲ. ಆಭರಣ ಧರಿಸುವಂತಿರಲಿಲ್ಲ, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ, ಇಂಥ ಸಂದರ್ಭದಲ್ಲಿ ಸಾಮಾಜಿಕ ಸುಧಾರಾಣೆಗಾಗಿ ಬಂದ ಗುರುಗಳು ಕಂದಾಚಾರ, ಮೂಡನಂಬಿಕೆಗಳನ್ನು, ಆವಿಚಾರಗಳನ್ನು ಟೀಕಿಸಿ ಸರಿಪಡಿಸಲು ಶ್ರಮಿಸಿದರು ಎಂದು ಹೇಳಿದರು.
ವಿದ್ಯೆಯನ್ನು ಪಡೆದು ಸ್ವತಂತ್ರರಾಗಿರಿ, ಸಂಘಟನೆಯಿAದ ಶಕ್ತಿವಂತರಾಗಿರಿ ಎಂದು ಸಂದೇಶ ಸಾರಿದರು. ಮನುಷ್ಯ ಜಾತಿಯಿಂದ ದೊಡ್ಡವನಾಗುವುದಿಲ್ಲ. ಬದಲಾಗಿ ಆತ ಬದುಕಿನ ನೀತಿಯಿಂದ, ರೀತಿಯಿಂದ ದೊಡ್ಡವನಾಗುತ್ತಾನೆ ಎಂದು ತೋರಿಸಿಕೊಟ್ಟವರು ನಾರಾಯಣಗುರು ಎಂದು ಬಣ್ಣಿಸಿದರು.
ನಾರಾಯಣಗುರುಗಳು ಕೇವಲ ಒಂದು ಜನಾಂಗದ ಗುರು ಅಲ್ಲ. ಅವರು ಮಾನವ ಜನಾಂಗದ ಗುರು. ಸಾಮಾಜಿಕ ಕ್ರಾಂತಿಯ ಹರಿಕಾರ ಎಂದ ಅವರು ತಮ್ಮ ಆಧ್ಯಾತ್ಮಿಕ ಚಿಂತನೆ ಮೂಲಕ ಮತಾಂತರವನ್ನು ತಪ್ಪಿಸಿದರು. ಸಮಾನತೆಯನ್ನು ತರುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೋರಾಟ ಮಾಡಿದರು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕಂದಾಯ ಶಾಖೆಯ ಶಿರಸ್ತೆದಾರ ಎಂ.ಸಿ.ಹೇಮAತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್ ಉಪಸ್ಥಿತರಿದ್ದರು.