ಉಡುಪಿ: ಹಿಂದಿನ ಸರ್ಕಾರ ಈಡಿಗ ಸಮಾಜದ ಅಭಿವೃದ್ಧಿಗಾಗಿ ನಾರಾಯಣ ಗುರು ನಿಗಮ ಸ್ಥಾಪನೆ ಮಾಡಿತ್ತು. ಅದರೆ ಈ ಬಾರಿಯ ಬಜೆಟ್ನಲ್ಲಿ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ನಾರಾಯಣಗುರುಗಳನ್ನು ಪೂಜಿಸುವವರಿಗೆ ಶಕ್ತಿ ಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೂಡಲೇ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಗುರುವಾರ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಬಿಲ್ಲವರ ಸೇವಾ ಸಂಘ ಸಹಕಾರದೊಂದಿಗೆ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲದ ಸಮಯದಲ್ಲಿ ನಾರಾಯಣ ಗುರುಗಳೆಂಬ ಸಂತ ಅವತರಿಸಿ ಬಂದು ಸಮಾಜದಲ್ಲಿ ವೈಚಾರಿಕತೆಯನ್ನು ಬೆಳೆಸಿ ಧಾರ್ಮಿಕ ಸಮತೋಲನ ಕಾಪಾಡಿದ್ದರು. ಕೇರಳದ ಸಾಮಾಜಿಕ ವ್ಯವಸ್ಥೆ ಬಗ್ಗೆ ಸ್ವತ: ವಿವೇಕಾನಂದರಿಂದಲೇ ಕಟು ಟೀಕೆ ಮಾಡಿದ್ದರು. ಅಂತ ನೆಲದಲ್ಲಿ ಸಮಾನತೆಯ ಕ್ರಾಂತಿ ಉಂಟು ಮಾಡಿದವರು ನಾರಾಯಣ ಗುರುಗಳು. ಇದರಿಂದ ಹಿಂದುಳಿದ ವರ್ಗದವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು. ಸಂರ್ಷದ ಮೂಲಕ ಸಮಾಜದಲ್ಲಿ ಬದಲಾವಣೆಗಳಾಗಿವೆ. ಅದರೆ ಗುರುಗಳು ಶಾಂತಿಯ ಮೂಲಕ ಕ್ರಾಂತಿ ಮಾಡಿದ್ದಾರೆ. ದ್ವೇಷವಿಲ್ಲದೆ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತಂದಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂಸ್ಕಾರಯುತ ಸಮಾಜ ನಿರ್ಮಿಸಬೇಕು. ಮಹನೀಯರ ಜಯಂತಿಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾಗಿ ಅಚರಿಸುವಂತಾಗಬೇಕು. ನಾರಾಯಣ ಗುರು ಜಯಂತಿಗೆ ಸರ್ಕಾರ ರಜೆ ಘೋಷಿಸಬೇಕು. ಅವರ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಹೇಳಿದರು.
ಮಂಗಳೂರು ವಿವಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯೋಜಕ ಡಾ. ಗಣೇಶ್ ಅಮೀನ್ ಸಂಕಮಾರ್ ಉಪನ್ಯಾಸ ನೀಡಿ, ನಾರಾಯಣ ಗುರುಗಳು 41 ದೇವಸ್ಥಾನಗಳನ್ನು ಸ್ಥಾಪಿಸಿದ್ದರು. ಅದರ ಪಕ್ಕದಲ್ಲೆ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದ್ದರು. ಸಂಸತಿ ತಿಳಿಯಲು ಮಾತೃಭಾಷೆ, ಧಾರ್ಮಿಕವಿಧಿ ಅರಿಯಲು ಸಂಸತ, ಪ್ರಪಂಚ ಜ್ಞಾನಕ್ಕಾಗಿ ಆಂಗ್ಲಭಾಷೆ ಅತೀ ಅಗತ್ಯ ಎಂಬುದಾಗಿ ಪ್ರತಿಪಾದಿಸಿದ್ದಾರೆ. ಭಾರತೀಯ ಸನಾತನ ಸಂಸತಿ ರಸಿದ ಮುಖ್ಯಗುರುಗಳಲ್ಲಿ ನಾರಾಯಣ ಗುರುಗಳು ಪ್ರಮುಖರು. ಅವರಿಂದಾಗಿ ಅನ್ಯಮತ ಆಮಿಷಕ್ಕೆ ಒಳಗಾಗಿ ಮತಾಂತರವಾಗುತ್ತಿದ್ದ ಸಾವಿರಾರು ಕುಟುಂಬಗಳು ಹಿಂದೂಧರ್ಮದಲ್ಲೆ ಉಳಿದುಕೊಂಡಿವೆ ಎಂದು ಹೇಳಿದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಅಪರ ಜಿಲ್ಲಾಧಿಕಾರಿ ಮಮತ ದೇವಿ ಜಿ.ಎಸ್., ನಗರ ಸಭೆ ಮಾಜಿ ಅಧ್ಯಕ್ಷ ಕಿರಣ್ ಬೈಲೂರು, ಮೀನಾ ಬನ್ನಂಜೆ, ನಗರ ಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್, ವಿಜಯ ಕೊಡವೂರು, ಗಿರೀಶ್ ಅಂಚನ್, ಸಂತೋಷ್ ಜತ್ತನ್, ಎಡ್ಲಿನ್ ಕರ್ಕಡ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಪೂಜಾರಿ ಉಪಸ್ಥಿತರಿದ್ದರು.