ಜಿಲ್ಲೆ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಾರಾಯಣ ಆಸ್ಪತ್ರೆ ಸಾಧನೆ

ಮೈಸೂರು: ನಗರದ ನಾರಾಯಣ ಆಸ್ಪತ್ರೆಯು 50ಕ್ಕೂ ಹೆಚ್ಚು ಸೈಟೊರಿಡಕ್ಟಿವ್ ಸರ್ಜರಿ (ಸಿಆರ್‌ಎಸ್) ಮತ್ತು ಹೈಪರ್ ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕೀಮೋಥೆರಪಿ (ಎಚ್‌ಐಪಿಇಸಿ) ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯುತ್ಕೃಷ್ಟ ಆಸ್ಪತ್ರೆಯಾಗಿ ಮೂಡಿ ಬಂದಿದೆ ಎಂದು ಆಸ್ಪತ್ರೆಯ ಸರ್ಜಿಕಲ್ ಅಂಕೊಲಾಜಿಸ್ಟ್‌ಗಳಾದ ಡಾ.ಕೆ.ಆರ್. ಸುಹಾಸ್, ಡಾ.ಎಚ್.ಎಂ. ಲೋಕೇಶ್ ತಿಳಿಸಿದರು.

ನಾರಾಯಣ ಆಸ್ಪತ್ರೆಯು ಮೈಸೂರು ವಲಯದಲ್ಲಿ ಈ ಸಂಕೀರ್ಣ ಚಿಕಿತ್ಸೆಯನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸುವ ಮೊದಲ ಮತ್ತು ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದೆ ಮತ್ತು ಪೆರಿಟೋನಿಯಲ್ ಸರ್ಫೇಸ್ ಮ್ಯಾಲಿಗ್ನಸ್ಸೀಸ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಉತ್ಕೃಷ್ಟ ಚಿಕಿತ್ಸಾ ಕೇಂದ್ರವಾಗಿ ರೂಪುಗೊಂಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮಿಬ್ಬರ ನೇತೃತ್ವದಲ್ಲಿ ಆಸ್ಪತ್ರೆಯಲ್ಲಿ ಸಂಕೀರ್ಣ ಹಂತದ ಕ್ಯಾನ್ಸರ್‌ಗಳಿಗೆ ಅದರಲ್ಲೂ ವಿಶೇಷವಾಗಿ ಪೆರಿಟೋನಿಯಲ್ ಹರಡಿರುವ ಅಂಡಾಶಯ ಕ್ಯಾನ್ಸರ್ ಪ್ರಕರಣಗಳಿಗೆ ಅತ್ಯಾಧುನಿಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಪೆರಿಟೋನಿಯಲ್ ಸರ್ಫೇಸ್‌ಮ್ಯಾಲಿಗ್ನಸ್ಸೀಸ್ ಕ್ಯಾನ್ಸರ್ ಪ್ರಕರಣಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಿಆರ್‌ಎಸ್ ಮತ್ತು ಎಚ್‌ಐಪಿಇಸಿ ಶಸ್ತ್ರಚಿಕಿತ್ಸಾ ವಿಧಾನಗಳು ಬಹಳ ನೆರವಾಗಿವೆ. ಈ ನವೀನ ಶಸ್ತ್ರಚಿಕಿತ್ಸಾ ತಂತ್ರಗಳು ಮತ್ತು ಉತ್ತಮ ಆರೈಕೆಯ ಮೂಲಕ ನಮ್ಮ ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಈ ಸಾಧನೆಯು ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ರೋಗಿಗಳು ನಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಪೆರಿಟೋನಿಯಲ್ ಮ್ಯಾಲಿಗ್ನಸ್ಸೀಸ್ ಕ್ಯಾನ್ಸರ್‌ಗೆ ಉತ್ತಮ ಚಿಕಿತ್ಸೆ ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ. ಈ ಶಸ್ತ್ರಚಿಕಿತ್ಸೆಯು ಬಹಳ ಸವಾಲಿನದ್ದಾಗಿದೆ. ಪ್ರತೀ ಶಸ್ತ್ರಚಿಕಿತ್ಸೆಯು 8-12 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಸಂಕೀರ್ಣ ಚಿಕಿತ್ಸೆಯಾದ್ದರಿಂದ ಬಹು ಶಸ್ತ್ರಚಿಕಿತ್ಸಕರು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇರುತ್ತದೆ ಎಂದರು.

ರಾಜ್ಯದ ಇತರ ಆಸ್ಪತ್ರೆಗಳಿಗಿಂತ ಅತಿ ಹೆಚ್ಚು ಸಿಆರ್‌ಎಸ್, ಎಚ್‌ಐಪಿಇಸಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಸಾಧನೆ ಮಾಡುವ ಮೂಲಕ ನಗರದ ನಾರಾಯಣ ಆಸ್ಪತ್ರೆಯು ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆ ಒದಗಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಈ ವಿಶೇಷ ಚಿಕಿತ್ಸೆ ಒದಗಿಸುವ ಕೆಲವೇ ಆಸ್ಪತ್ರೆಗಳಲ್ಲಿ ನಾರಾಯಣ ಆಸ್ಪತ್ರೆಯೂ ಒಂದು ಎಂಬ ಕೀರ್ತಿ ಗಳಿಸಿದೆ. ಈ ಶಸ್ತ್ರಚಿಕಿತ್ಸೆಯ ವೆಚ್ಚವು ಸಾಮಾನ್ಯವಾಗಿ 5 ರಿಂದ 6 ಲಕ್ಷ ರೂಪಾಯಿಗಳಾಗಿದ್ದು, ಬಹುತೇಕ ಎಲ್ಲ ವಿಮಾ ಯೋಜನೆಗಳು ಕವರೇಜ್ ನೀಡುತ್ತವೆ ಎಂದು ಹೇಳಿದರು.