ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆಗೆ ಹೆಸರಾಗಿರುವ ನಾರಾಯಣ ಹೆಲ್ತ್ ಮೊದಲ ಬಾರಿಗೆ ‘ಅದಿತಿ’ ಆರೋಗ್ಯ ವಿಮಾ ಯೋಜನೆ ಅನಾವರಣಗೊಳಿಸಿದ್ದು, 1 ಕೋಟಿ ರೂ. ಮೌಲ್ಯದ ಶಸಚಿಕಿತ್ಸೆ ಹಾಗೂ 5 ಲಕ್ಷ ರೂ. ಚಿಕಿತ್ಸಾ ವೆಚ್ಚವನ್ನು ವಿಮೆ ಒಳಗೊಂಡಿದೆ.
ಈ ವಿಮಾ ಯೋಜನೆಯಲ್ಲಿ ನಾಲ್ಕು ಜನರು ಇರುವ ಕುಟುಂಬಕ್ಕೆ ವಾರ್ಷಿಕ 10 ಸಾವಿರ ರೂ. ಪ್ರೀಮಿಯಂ ನಿಗದಿ ಪಡಿಸಲಾಗಿದೆ. ಇದರೊಂದಿಗೆ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಸಮಗ್ರ ಆರೋಗ್ಯ ರಕ್ಷಣೆ ಒದಗಿಸುತ್ತಿರುವ ದೇಶದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾರಾಯಣ ಹೆಲ್ತ್ ನೆಟ್‌ವರ್ಕ್ ಆಸ್ಪತ್ರೆಗಳ ಸೇವೆಗೆ ಈ ವಿಮೆ ಬಳಕೆಯಾಗಲಿದೆ.
ವಿಮೆ ಬಗ್ಗೆ ನಾರಾಯಣ ಹೆಲ್ತ್ ಹಾಗೂ ನಾರಾಯಣ ಇನ್ಶೂರೆನ್ಸ್ ಲಿ. ಅಧ್ಯಕ್ಷ ಡಾ. ದೇವಿ ಶೆಟ್ಟಿ ಮಾತನಾಡಿ, ಇದು ಕೇವಲ ವಿಮಾ ಉತ್ಪನ್ನ ಬಿಡುಗಡೆಯಲ್ಲ, ಗುಣಮಟ್ಟದ ಆರೋಗ್ಯಸೇವೆ ಪ್ರತಿಯೊಬ್ಬ ಭಾರತೀಯನಿಗೂ ಲಭ್ಯವಾಗುವಂತೆ ಮಾಡುವ ಮಹತ್ತರ ಹೆಜ್ಜೆ. ‘ಅದಿತಿ’ ವಿಮಾ ಯೋಜನೆಯನ್ನು ವೈದ್ಯಕೀಯ ವೆಚ್ಚದ ಹಣಕಾಸು ಹೊರೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ತಡೆಗಟ್ಟಬಹುದಾದ ರೋಗವನ್ನು ನಿಯಂತ್ರಿಸಲು ಹಾಗೂ ಆರೋಗ್ಯವನ್ನು ಉತ್ತೇಜಿಸುವುದು ನಾರಾಯಣ ಹೆಲ್ತ್‌ನ ಪ್ರಾಥಮಿಕ ಗುರಿಯಾಗಿದೆ. ಹಾಗಾಗಿ ಈ ವಿಮೆ ಮಾಡಿಸಿಕೊಂಡವರಿಗೆ ನಾರಾಯಣ ಹೆಲ್ತ್‌ನಲ್ಲಿ ಎಲ್ಲ ರೀತಿಯ ಆರೋಗ್ಯ ಪರೀಕ್ಷೆಗಳು ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ. ಆಸ್ಪತ್ರೆಯ 24*7 ಸಹಾಯವಾಣಿಯು ವ್ಯಕ್ತಿಯ ಆರೋಗ್ಯ ದಾಖಲೆಗಳನ್ನು ಟ್ರ್ಯಾಕ್ ಮಾಡಲಿದೆ. ಉದಾಹರಣೆಗೆ: ಮಧುಮೇಹಿಗಳಿದ್ದರೆ ಅವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸದಿದ್ದರೆ ಪರೀಕ್ಷೆಗೆ ಸೂಚಿಸಲಾಗುತ್ತದೆ. ಇದಕ್ಕಾಗಿ ರೋಗಿಯ ಮಾದರಿ ಪಡೆಯಲು ಆಸ್ಪತ್ರೆ ಸಿಬ್ಬಂದಿ ಅವರ ಮನೆಬಾಗಿಲಿಗೇ ಹೋಗಲಿದ್ದಾರೆ. ಈ ವಿಮೆ ಮೂಲಕ ನಾರಾಯಣ ಹೆಲ್ತ್ ನೆಟ್‌ವರ್ಕ್‌ನಲ್ಲಿ ಸೇವೆ ಪಡೆಯಲು ಯಾವುದೇ ಅಡೆತಡೆ ಇಲ್ಲದೆ ವಿಮೆ ಕ್ಲೈಮ್ ಮಾಡಲು ಮತ್ತು ರೋಗಿ ತನ್ನ ಆರೋಗ್ಯದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.