ಜಿಲ್ಲೆ

ನಾರಾಯಣ ಗುರುಗಳ ತತ್ವಗಳೇ ದಾರಿದೀಪ

ಹೊನ್ನಾವರ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳು ಎಲ್ಲರಿಗೂ ದಾರಿದೀಪವಾಗಿದೆ ಎಂದು ಸಿಗಂದೂರು ದೇವಾಲಯದ ಧರ್ಮದರ್ಶಿ ರಾಮಪ್ಪ ಜಿ. ಹೇಳಿದರು.

ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಾಮಧಾರಿ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಕುರಿತ ಉಪನ್ಯಾಸ ಮತ್ತು ವಿದ್ಯಾರ್ಥಿಗಳು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಸಮಾಜದಲ್ಲಿ ಅತ್ಯಂತ ಬಡತನವಿತ್ತು. ಇಂದು ನಮ್ಮ ಮಕ್ಕಳು ಎಲ್ಲ ರಂಗಗಳಲ್ಲಿ ಯಾರಿಗೂ ಏನು ಕಡಿಮೆ ಇಲ್ಲವೆಂಬ ರೀತಿಯಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದಾರೆ. ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನಕ್ಕೆ ಏರುವಂತಾಗಬೇಕು ಎಂದರು.

ಪತ್ರಕರ್ತ ದಿನೇಶ ಅಮಿನ್ ಮಟ್ಟು ಮಾತನಾಡಿ, ‘ಶಿಕ್ಷಣವೂ ಸತ್ಯ ಹೇಳುವ ಶಕ್ತಿ ಮತ್ತು ವೈಚಾರಿಕವಾಗಿ ಯೋಚಿಸುವ ಸಾಮರ್ಥ್ಯವನ್ನು ಕೊಡಬೇಕು. ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರಿಗೆ ಉನ್ನತವಾದ ಶಿಕ್ಷಣ ನೀಡಬೇಕು. ನಾರಾಯಣ ಗುರುಗಳು ಬಯಸಿದ ಶಿಕ್ಷಣವೆಂದರೆ ಬೌದ್ಧಿಕ ದಾಸ್ಯದಿಂದ ಮುಕ್ತರಾಗುವುದು ಮತ್ತು ಸರಳತೆಯಿಂದ ಬದುಕುವುದು. ಅವರ ತತ್ವಗಳನ್ನು ಅಳವಡಿಕೊಂಡರೆ ಜೀವನದಲ್ಲಿ ನೆಮ್ಮದಿ ಸಿಗುವುದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿಕ್ರಮ ರಾಮ ನಾಯ್ಕ ಮಾತನಾಡಿ, ನಮ್ಮ ಸಮಾಜದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಅಂತವರಿಗೆ ಸಂಘಟನೆ ವತಿಯಿಂದ ಸಹಕಾರ ನೀಡಲಾಗುವುದು. ಸಮಾಜದವರು ಒಗ್ಗಟ್ಟಾದರೆ ಸಮಾಜ ಉನ್ನತಿ ಸಾಧ್ಯ. ಎಲ್ಲ ವೈಮನಸ್ಸುಗಳನ್ನು ಮರೆತು ಸಂಘಟಿತರಾಗಿ ಅಭಿವೃದ್ಧಿ ಸಾಧಿಸಬೇಕು. ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಿ ಕೀರ್ತಿ ತರಬೇಕು ಎಂದರು.

ಸಾಂಬಾರು ಅಭಿವೃದ್ಧಿ ಮಂಡಳಿ ಪ್ರಧಾನ ವ್ಯವಸ್ಥಾಪಕ ಡಾ. ಎಚ್.ಆರ್. ನಾಯ್ಕ, ಪದವಿಪೂರ್ವ ಶಿಕ್ಷಣದ ಪ್ರಬಾರಿ ಉಪನಿರ್ದೇಶಕ ಸತೀಶ ಬಿ. ನಾಯ್ಕ, ಮಾಜಿ ಸಚಿವ ಆರ್.ಎನ್. ನಾಯ್ಕ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ, ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅನಂತ ನಾಯ್ಕ ಹೆಗ್ಗಾರ ಸ್ವಾಗತಿಸಿದರು. ರಮೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧೀಶ ನಾಯ್ಕ ನಿರ್ವಹಿಸಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.