ಜಿಲ್ಲೆ

ನಾರಾಯಣ ಗುರುಗಳ ಆದರ್ಶ ಪಾಲಿಸಿ

ಬಾಲಮುರಳಿಕೃಷ್ಣ

ಸುಂಟಿಕೊಪ್ಪ: ನಾರಾಯಣ ಗುರುಗಳ ಆದರ್ಶವನ್ನು ನಾವೆಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸತೀಶ್ ತಿಳಿಸಿದರು.


ಇಲ್ಲಿನ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ವತಿಯಿಂದ ಮಂಗಳವಾರ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ 170ನೇ ಜಯಂತಿ ಹಾಗೂ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಜಾತೀಯತೆ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ದೇವಾಲಯಗಳನ್ನು ನಿರ್ಮಿಸಿ ಶೋಷಿತ ವರ್ಗಕ್ಕೆ ದೇವಾಲಯಗಳ ಪ್ರವೇಶಕ್ಕೆ ನಾರಾಯಣ ಗುರುಗಳು ಅವಕಾಶ ಮಾಡಿಕೊಟ್ಟರು. ಸಮುದಾಯದ ಏಳಿಗೆಗೆ ಅವರು ನೀಡಿರುವ ಕೊಡುಗೆ ಅಪಾರ ಎಂದರು.


ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಸದಸ್ಯೆವೀಣಾ ಮಾತನಾಡಿ, ಸಹೋದರಿಯ ರಕ್ಷಣೆಯನ್ನು ಪ್ರತಿಯೊಬ್ಬ ಸಹೋದರ ಮಾಡಿದ್ದಲ್ಲಿ ರಾಮರಾಜ್ಯದ ಕಲ್ಪನೆ ನನಸಾಗಲಿದೆ. ಮಹಿಳೆಯರಿಗೆ ಸಮಸ್ಯೆ ಉಂಟಾದಲ್ಲಿ ಎಲ್ಲರೂ ತಮ್ಮ ಮನೆಯ ಸಮಸ್ಯೆ ಎಂದು ಭಾವಿಸಿ ಬಗೆಹರಿಸಲು ಸಿದ್ಧರಿರಬೇಕು. ಹಾಗಾದಾಗ ಮಾತ್ರ ಮಹಿಳೆ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.


ಕಾರ್ಯಕ್ರಮಕ್ಕೂ ಮೊದಲು ನಾರಾಯಣ ಗುರುಗಳ ಭಾವಚಿತ್ರಕ್ಕೆ ನಾರಾಯಣಗುರು ಬಿಲ್ಲವ ಸೇವಾ ಸಂಘದ ಸಲಹಾ ಸಮಿತಿ ಸದಸ್ಯ ಬಿ.ಬಿ ಮೋನಪ್ಪ ಪೂಜಾರಿ ಪೂಜೆ ಸಲ್ಲಿಸಿದರು. ನಂತರ ನೆರೆದಿದ್ದ ಬಿಲ್ಲವ ಸಮಾಜದ ಸದಸ್ಯರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.


ಇದೇ ವೇಳೆ ಸಮಿತಿಯ ಸದಸ್ಯರು ಪರಸ್ಪರ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎಂ ಮಣಿ ಮುಖೇಶ್ ಗೌರವ ವಹಿಸಿದ್ದರು. ದೇಯಿ ಬೈದೇತಿ ಮಹಿಳಾ ಸಂಘದ ಅಧ್ಯಕ್ಷ ಮಧು ನಾಗಪ್ಪ, ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್, ಸಲಹಾ ಸಮಿತಿ ಸದಸ್ಯರಾದ ಡಾ.ಯಶೋಧರ ಪೂಜಾರಿ, ಕೆ.ಪಿ.ಜಗನ್ನಾಥ್, ಬಿ.ಬಿ.ಜಿನ್ನಪ್ಪ ಪೂಜಾರಿ, ರಮೇಶ್ ಪೂಜಾರಿ, ರಮೇಶ್ ಕೊಡಗರಹಳ್ಳಿ, ಅಂಜಲಿ ಯಶೋಧರ ಪೂಜಾರಿ, ಮಹಿಮಾ ಸತ್ಯ, ಪೂರ್ಣಿಮಾ ರವಿ, ಬೇಬಿ, ಮೀನಾಕ್ಷಿ, ಅಶೋಕ್, ಮಿಲನ್, ಹರೀಶ್ ಇತರರಿದ್ದರು.