ಉಡುಪಿಯ ಅಂಬಲಪಾಡಿಯಲ್ಲಿ ಶ್ರೀ ನಾರಾಯಣ ಗುರು ಸಮುದಾಯ ಭವನದ ಸಭಾಂಗಣವನ್ನು ಡಾ. ನಿ.ಬೀ. ವಿಜಯ ಬಲ್ಲಾಳ್​ ಉದ್ಘಾಟಿಸಿದರು. ಸುಜಾತಾ ಶೆಟ್ಟಿ, ಶಿವಕುಮಾರ್​ ಅಂಬಲಪಾಡಿ, ಶಿವದಾಸ್​ ಪಿ., ರಾಜೇಶ್​, ದಯಾನಂದ ಎ., ಮಹೇಂದ್ರ ಕೋಟ್ಯಾನ್​, ವಿಜಯಾ ಜಿ. ಬಂಗೇರ, ಗೋದಾವರಿ ಎಂ.ಸುವರ್ಣ ಇತರರಿದ್ದರು. 
ಜಿಲ್ಲೆ

ದೇವತಾನುಗ್ರಹ, ಸಂಘಟನೆಯಿಂದ ಸಾಧನೆ ಸುಲಭ

ನಿ.ಬೀ. ವಿಜಯ ಬಲ್ಲಾಳ್​ ಅಭಿಮತ -- ನಾರಾಯಣ ಗುರು ಸಭಾಂಗಣ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ನವವಿಧ ಭಕ್ತಿಗಳಲ್ಲಿ ಭಜನೆಗೆ ಬಹಳ ಪ್ರಾಮುಖ್ಯತೆ ಇದೆ. ಹೀಗಾಗಿ ದೇವತಾನುಗ್ರಹ ಮತ್ತು ಸಂಘಟನಾ ಶಕ್ತಿಯ ಸಮ್ಮಿಲನದಿಂದ ನಿಯೋಜಿತ ಕಾರ್ಯ ಸಾಧನೆ ಸುಲಭವಾಗಲು ಸಾಧ್ಯ ಎಂದು ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್​ ಅಭಿಮತ ವ್ಯಕ್ತಪಡಿಸಿದರು.

ಅಂಬಲಪಾಡಿ ಬಿಲ್ಲವ ಸೇವಾ ಸಂಘ(ರಿ.) ಹಾಗೂ ಶ್ರೀ ವಿಠೋಬ ಭಜನಾ ಮಂದಿರದ ಆಶ್ರಯದಲ್ಲಿ ಇತ್ತೀಚೆಗೆ ಉಡುಪಿಯ ಅಂಬಲಪಾಡಿಯಲ್ಲಿ ಆಯೋಜಿಸಿದ್ದ ಸಂಘದ ಶ್ರೀ ನಾರಾಯಣ ಗುರು ಸಮುದಾಯ ಭವನದ 2ನೇ ಅಂತಸ್ತಿನ ಸಭಾಂಗಣ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಉದ್ಘಾಟಿಸಿ ಮಾತನಾಡಿದರು.

ಮಾದರಿ ಕಾರ್ಯ

ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಬಗು ಎನ್ನುವಂತೆ ಶ್ರೀ ವಿಠೋಬ ಭಜನಾ ತಂಡದೊಂದಿಗೆ ವಿದ್ಯಾರ್ಥಿನಿಯರನ್ನೊಳಗೊಂಡ ಮಹಿಳಾ ಕುಣಿತದ ಭಜನಾ ತಂಡ ರಚಿಸಿರುವುದು ಮಾದರಿ ಕಾರ್ಯ. ಸರ್ಕಾರದ ಅನುದಾನ ಮತ್ತು ದಾನಿಗಳ ನೆರವಿನಿಂದ ನಿಮಾರ್ಣಗೊಂಡ ಈ ಸಭಾಂಗಣ ಸಮಾಜಕ್ಕೆ ಉಪಯುಕ್ತವಾಗಲಿ ಎಂದು ಶುಭ ಹಾರೈಸಿದರು.

ಸಾಧಕರಿಗೆ ಸನ್ಮಾನ

ನಿವೃತ್ತ ಮುಖ್ಯೋಪಾಧ್ಯಾಯ ಪಟೇಲರ ಮನೆ ಎ. ಜಯಕರ ಶೆಟ್ಟಿ ಅಂಬಲಪಾಡಿ ಅವರಿಗೆ 'ಶಿಕ್ಷಕ ರತ್ನ' ಪ್ರಶಸ್ತಿ, ಖ್ಯಾತ ಸಾಹಿತಿ ಹಾಗೂ ನಾಟಕಕಾರ ಗಂಗಾಧರ್​ ಕಿದಿಯೂರು ಅವರಿಗೆ 'ಸಾಹಿತ್ಯ ರತ್ನ' ಪ್ರಶಸ್ತಿ, ಸಮಾಜ ಸೇವಕ ಗೋಪಾಲ್​ ಸಿ. ಬಂಗೇರ ಪಂದುಬೆಟ್ಟು ಅವರಿಗೆ 'ಸಮಾಜ ಸೇವಾ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಂಬಲಪಾಡಿ ಗ್ರಾಪಂ ಅಧ್ಯಕ್ಷೆ ಸುಜಾತಾ ಶೆಟ್ಟಿ ಮಾತನಾಡಿದರು. ಸಂಘದ ಅಧ್ಯಕ್ಷ ಶಿವಕುಮಾರ್​ ಅಂಬಲಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಶಿವದಾಸ್​ ಪಿ., ಪ್ರ.ಕಾರ್ಯದರ್ಶಿ ರಾಜೇಶ್​, ಕೋಶಾಧಿಕಾರಿ ದಯಾನಂದ ಎ., ಜತೆ ಕಾರ್ಯದರ್ಶಿ ಮಹೇಂದ್ರ ಕೋಟ್ಯಾನ್​, ಮಹಿಳಾ ಘಟಕದ ಗೌರವ ಸಂಚಾಲಕಿ ವಿಜಯಾ ಜಿ. ಬಂಗೇರ, ಸಂಚಾಲಕಿ ಗೋದಾವರಿ ಎಂ.ಸುವರ್ಣ, ಭಜನಾ ಸಂಚಾಲಕ ಕೆ. ಮಂಜಪ್ಪ ಸುವರ್ಣ, ಗ್ರಾಮಸ್ಥರು ಉಪಸ್ಥಿತರಿದ್ದರು. ಸಂಘದ ಸದಸ್ಯರು, ಮಹಿಳಾ ಘಟಕ ಮತ್ತು ವಿದ್ಯಾರ್ಥಿನಿಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಿತು.