ಜಿಲ್ಲೆ

ನಾರಾಯಣಗುರುಗಳ ವಿಚಾರಧಾರೆ ಜೀವನದಲ್ಲಿ ಅಳವಡಿಸಿ: ಪದ್ಮರಾಜ್ ಆರ್. ಕರೆ

Prashanth S Suvarna

ಭಟ್ಕಳ: ನಾರಾಯಣಗುರುಗಳು ವಿಚಾರಧಾರೆಗಳು ಭಾಷಣಕ್ಕೆ ಮಾತ್ರ ಸೀಮಿತವಾಗದೆ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.

ಭಟ್ಕಳ ಮತ್ತು ಸಾರದಹೊಳೆ ನಾಮಧಾರಿಗಳ ಕೂಟ ವತಿಯಿಂದ ನಿಚ್ಚಲಮಕ್ಕಿ ಆಸರಕೇರಿ ದೇವಸ್ಥಾನದಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣಗುರುಗಳ 169ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಹಿಂದುಳಿದ ವರ್ಗದವರನ್ನು ಅಸ್ಪಶ್ಯರಂತೆ ಕಾಣುತ್ತಿದ್ದರು. ಕೇರಳದಲ್ಲಿ ಹುಟ್ಟಿದ ಸಂತರು ಸಂಘರ್ಷರಹಿತ ಕ್ರಾಂತಿ ಆರಂಭಿಸಿದ್ದರು. 1912ರಲ್ಲಿ ಮಂಗಳೂರಿನಲ್ಲಿ ದೇವಸ್ಥಾನ ಕಟ್ಟಿಸಿ ಹಿಂದುಳಿದ ವರ್ಗದವರಿಗೆ ಪ್ರವೇಶ ನೀಡುವಂತೆ ಮಾಡಿದ್ದರು. ಆದರೆ ಇಂದು ನಮ್ಮವರಿಂದಲೆ ಸಂಘಟನೆ ಒಡೆಯುವ ಕೆಲಸವಾಗುತ್ತಿದೆ. ಇಂತಹ ಒತ್ತಡಕ್ಕೆ ಮಣಿಯದೆ ನಾವೆಲ್ಲ ಸಂಘಟಿತರಾಗಬೇಕು ಎಂದರು.

ಭಾರತದ ಸಂವಿಧಾನದಲ್ಲಿ ಸಮಾನತೆಯ ಆಶಯಗಳನ್ನು ಅಳವಡಿಸಲಾಗಿದೆ ಇದಕ್ಕೆ ಅಂಬೇಡ್ಕರ್‌ರವರಿಗೆ ಶ್ರೀ ನಾರಾಯಣ ಗುರುಗಳ ವಿಚಾರಧಾರೆಗಳು ಸ್ಫೂರ್ತಿಯಾಗಿದ್ದವು. ಜಾತಿ ಭೇದ ಮತ ದ್ವೇಷವಿಲ್ಲದೆ ನಾವೆಲ್ಲರೂ ಸಹೋದರತ್ವದಿಂದ ಸಮಾಜದ ಒಳಿತಿಗಾಗಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಈ ಹಿಂದುಳಿದ ವರ್ಗ ಸಮಾಜದ ತುಳಿತಕ್ಕೆ ಒಳಗಾಗಿತ್ತು. ಮುಳುಗುತ್ತಿರುವ ಸಿದ್ಧಾಂತವನ್ನು ನಾರಾಯಣಗುರುಗಳು ಮತ್ತೆ ತಂದಿದ್ದಾರೆ. ಅವರ ತತ್ವ, ಸಮಾಜಕ್ಕೆ ನೀಡಿದ ಜ್ಞಾನ ನಿತ್ಯ ನಿರಂತರ. ಸನ್ಯಾಸಿಗಳು ರಾಜಕೀಯ ಮಾಡಬಾರದು. ಶೈಕ್ಷಣಿಕವಾಗಿ ನಮ್ಮವರನ್ನು ಜಾಗ್ರತಗೊಳಿಸಬೇಕು. ಜ್ಞಾನವನ್ನು ಪಡೆದುಕೊಳ್ಳಬೇಕು. ನಮ್ಮ ಕರ್ತವ್ಯ ಧರ್ಮವನ್ನು ಸರಿಯಾಗಿ ಮಾಡಬೇಕು ಎಂದರು.

ನಿಚ್ಚಲಮಕ್ಕಿ ಆಸರಕೇರಿ ದೇವಸ್ಥಾನ ಗುರುಮಠದ ಅಧ್ಯಕ್ಷ ಕೃಷ್ಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನ ಅಧ್ಯಕ್ಷ ಸುಬ್ರಾಯ ನಾಯ್ಕ, ಶ್ರೀ ನಾರಾಯಣಗುರು ಜಯಂತ್ಯುತ್ಸವ ಸಂಚಾಲಕ ಮನಮೋಹನ ನಾಯ್ಕ, ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಸುಬ್ರಾಯ ನಾಯ್ಕ ಇದ್ದರು. ಪರಮೇಶ್ವರ ನಾಯ್ಕ, ಗಂಗಾಧರ ನಾಯ್ಕ, ನಾರಾಯಣ ನಾಯ್ಕ, ಮಂಜುನಾಥ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಸುಮಾರು 10ಸಾವಿರದಷ್ಟು ಸ್ವಜಾತಿ ಬಾಂಧವರು, ಗುರುಗಳ ಅನುಯಾಯಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಕೇರಳದಲ್ಲಿ ಒಂದೇ ಮತ ಒಬ್ಬನೇ ದೇವರು ಎಂದು ಎಂಬ ಸಮಾನತಾ ಸಿದ್ಧಾಂತದ ಮೂಲಕ ಸಂಪೂರ್ಣ ಮಾನವ ಜನಾಂಗವನ್ನು ಒಂದುಗೂಡಿಸಲು ನಾರಾಯಣಗುರುಗಳ ಆಧ್ಯಾತ್ಮಿಕ ಸಿದ್ಧಾಂತ ಮತ್ತು ತಪೋಬಲದಿಂದ ಇಂದು ಜಗತ್ತಿನ ಮಾದರಿ ಗುರುಗಳಾಗಿದ್ದಾರೆ.- ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ