ಜಿಲ್ಲೆ

ನಾರಾಯಣ ಗುರು ಆದರ್ಶ ಪಾಲಿಸಿ : ಶ್ರೀ ವಿಖ್ಯಾತಾನಂದ ಸ್ವಾಮೀಜಿ ಕರೆ

ಸದೇಶ್ ಕಾರ್ಮಾಡ್

ಮೈಸೂರು: ಸಮಾಜ ಪರಿವರ್ತನೆಗೆ ಶ್ರಮಿಸಿದ ಶ್ರೀ ನಾರಾಯಣ ಗುರುಗಳ ಆದರ್ಶವನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಕರೆ ನೀಡಿದರು.

ನಾರಾಯಣ ಧರ್ಮ ಪರಿಪಾಲನಾ ಯೋಗಂ ಶಾಖೆ, ನಾರಾಯಣಗುರು ಮಿಷನ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಜೆಕೆ ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾರಾಯಣ ಗುರು ಅವರ ಸಿದ್ಧಾಂತ ಸರ್ವಕಾಲಿಕವಾದದ್ದು. ಅವರು ಚಿಂತನೆಗಳು ಮುಂದೆಯೂ ಪ್ರಸ್ತುತವಾಗಲಿದೆ ಎಂದರು.

ನಾರಾಯಣಗುರು ಅವರು ಜಾತಿಬೇಧ ವಿರೋಧಿಸಿದರು. ಆದರೆ, ಅವರು ವೈದಿಕ ಪರಂಪರೆಯನ್ನು ದೂಷಿಸಿದೆ ಮೌನಕ್ರಾಂತಿಯ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದರು. ಹಾಗಾಗಿ ಅವರು ಅಗ್ರಮಾನ್ಯ ಸನ್ಯಾಸಿಯಾದರು. ಶೋಷಿತರಿಗೂ ದೇವರ ದರ್ಶನ ಮಾಡಿಸಿದರು ಎಂದು ಹೇಳಿದರು.

ನಾರಾಯಣ ಗುರುಗಳು ದೇವಾಲಯಗಳನ್ನು ನಿರ್ಮಾಣ ಮಾಡಿ ಜನರನ್ನು ಸಾತ್ವಿಕತೆಯ ಕಡೆಗೆ ಕೊಂಡೊಯ್ದರು. ನಾವು ನಾರಾಯಣ ಗುರುಗಳನ್ನು ಇಂದು ಆರಾಧಿಸುತ್ತಿದ್ದೇವೆ. ಅವರ ಅವರ ತತ್ವ, ಆದರ್ಶಗಳನ್ನು ನಾವು ಎಷ್ಟರ ಮಟ್ಟಿಗೆ ಜೀವನದಲ್ಲಿ ಅಳವಡಿಸಿಕೊಂ ಡಿದ್ದೇವೆ ಎಂಬುದು ಬಹಳ ಮುಖ್ಯ ಎಂದರು.

ವೇದಿಕೆಯಲ್ಲಿ ಎಸ್‌ಎನ್‌ಡಿಪಿ ಮೈಸೂರು ಶಾಖೆ ಅಧ್ಯಕ್ಷ ಜಿ. ರಾಜೇಂದ್ರನ್, ಪ್ರಧಾನ ಕಾರ್ಯದರ್ಶಿ ಆನಂದ್, ಬ್ರಹ್ಮಶ್ರೀ ನಾರಾಯಣ ಗುರು ಮಿಷನ್ ಅಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ. ಸುಕುಮಾರನ್, ಉಪಾಧ್ಯಕ್ಷ ಸೂರ್ಯನಾರಾಯಣ್, ಕಾರ್ಯದರ್ಶಿ ಮನೋಜ್ ಕುಮಾರ್, ಎಸ್‌ಎನ್‌ಡಿಪಿ ಕೊಡಗು ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್, ಬಿಲ್ಲವ ಸಂಘದ ಅಧ್ಯಕ್ಷ ಬಿ.ವಿ. ವೆಂಕಪ್ಪ ಹಾಗೂ ಇತರರು ಇದ್ದರು.