ಜಿಲ್ಲೆ

ಒಂದೇ ಜಾತಿ, ಮತವೆಂಬ ತತ್ವ ಪ್ರತಿಪಾದಿಸಿದ ನಾರಾಯಣಗುರು

ಕುಂದಾಪುರ: ಅಸ್ಪಶ್ಯತೆ ಹಾಗೂ ಅಸಮಾನತೆಯ ವಿರುದ್ಧ ವಿದ್ಯೆ ಎನ್ನುವ ಅಸ್ತ್ರ ಮಾತ್ರವೇ ಸೆಟೆದು ನಿಲ್ಲಲು ಸಾಧ್ಯ ಎನ್ನುವ ಸಂದೇಶ ನೀಡಿದ್ದ ಬ್ರಹ್ಮಶ್ರೀ ನಾರಾಯಣಗುರುಗಳು ಒಂದೇ ಜಾತಿ, ಒಂದೇ ಮತ ಎನ್ನುವ ಅಚಲವಾದ ತತ್ವವನ್ನು ಪ್ರತಿಪಾದಿಸಿದ್ದರು ಎಂದು ರತನ್ ರಮೇಶ ಪೂಜಾರಿ ಹೇಳಿದರು.

ಗಂಗೊಳ್ಳಿ ಬಿಲ್ಲವರ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಪ್ರಯುಕ್ತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಗುರು ಸಂದೇಶದ ಕಾಲ್ನಡಿಗೆ ಜಾಥಾದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಂಗೊಳ್ಳಿ ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮತ್ತು ಉದ್ಯಮಿ ಶಿವ ಆರ್.ಪೂಜಾರಿ ಶುಭಾಶಂಸನೆಗೈದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ತೇಜಸ್ ಪೂಜಾರಿ ಗುರುಸಂದೇಶದ ಬಗ್ಗೆ ಮಾತನಾಡಿದರು. ಯೋಗಾಸನದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಂದೀಪ ಪೂಜಾರಿ ತ್ರಾಸಿ ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಶಿವರಾಜ್ ಪೂಜಾರಿ, ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ, ಗಂಗೊಳ್ಳಿ ಬಿಲ್ಲವರ ಯುವಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಬಿಲ್ಲವರ ಮಹಿಳಾ ಘಟಕ ಅಧ್ಯಕ್ಷೆ ಇಂದಿರಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿಯಿಂದ ಹೊರಟ ಗುರು ಸಂದೇಶದ ಕಾಲ್ನಡಿಗೆ ಜಾಥಾ ಮುಖ್ಯ ರಸ್ತೆ ಮೂಲಕ ಗಂಗೊಳ್ಳಿ ಬಂದರು ಬಸ್ ನಿಲ್ದಾಣದವರೆಗೆ ಸಾಗಿ ಎಲಿಮೆಂಟರಿ ಶಾಲೆಯಲ್ಲಿ ಸಮಾಪನಗೊಂಡಿತು. ಜಯಶ್ರೀ ಪೂಜಾರಿ ಸ್ವಾಗತಿಸಿದರು. ನಿಶಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಪೂಜಾರಿ ವಂದಿಸಿದರು.