ಮಡಿಕೇರಿ:
ಮಾನವ ಕುಲದ ಏಕತೆಗಾಗಿ ಮತ್ತು ಸಮ ಸಮಾಜ ನಿರ್ಮಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಶ್ರಮಿಸಿದ್ದಾರೆ ಎಂದು ಚಿಂತಕ ಟಿ.ಪಿ. ರಮೇಶ್ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಮತ್ತು ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾರಾಯಣಗುರು ಶೋಷಿತ ಸಮಾಜಕ್ಕೆ ಅರಿವಿನ ಬೆಳಕನ್ನು ನೀಡಿದ್ದಾರೆ. ಒಂದೇ ಧರ್ಮ, ಒಂದೇ ದೇವರು ಎಂದು ಸಾರಿದ್ದಾರೆ. ಎಲ್ಲರೂ ಸಮಾಜಮುಖಿಯಾಗಿ ಬದುಕಬೇಕು ಎಂಬುದು ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಅವರ ಆಶಯವಾಗಿತ್ತು. ಮೂಢನಂಬಿಕೆ, ಅಜ್ಞಾನ ವಿರುದ್ಧ ಅವರು ಹೆಚ್ಚಿನ ಜಾಗೃತಿ ಮೂಡಿಸಿದರು. ತತ್ವ ನಿಷ್ಠೆ, ಸತ್ಯನಿಷ್ಠೆ ಮೂಲಕ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂಬುದನ್ನು ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಸಾರಿದ್ದಾರೆ. ಮತ ಸುಧಾರಣೆ ಮತ್ತು ಸಮಾಜ ಸುಧಾರಣೆಯ ಯೋಜಿತ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡುವುದು ನಾರಾಯಣಗುರು ಅವರ ಉದ್ದೇಶವಾಗಿತ್ತು. ಆ ನಿಟ್ಟಿನಲ್ಲಿ ೧೯೦೩ ರಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ (ಎಸ್‌ಎನ್‌ಡಿಪಿ) ಅಸ್ತಿತ್ವಕ್ಕೆ ತಂದರು.
ನುಲಿಯ ಚಂದಯ್ಯ ಬಿಜಾಪುರ ಜಿಲ್ಲೆಯ ಶಿವಣಗಿಯಲ್ಲಿ ೧೧೬೦ ರಲ್ಲಿ ಜನಿಸಿದರು. ಇವರ ಅಂಕಿತ ನಾಮ ಚಂದೇಶ್ವರಲಿಂಗ. ಹಗ್ಗ ಹೊಸೆದು ಮಾರುವುದು ಇವರ ಕಾಯಕ. ೪೮ ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಕಾಯಕ ನಿಷ್ಠೆ ಮತ್ತು ಜಂಗಮ ದಾಸೋಹ ಗಮರ್ನಾಹವಾಗಿದೆ. ನುಲಿಯ ಚಂದಯ್ಯ ಬಸವಣ್ಣನವರ ಸಮಕಾಲೀನರು ಮತ್ತು ಅವರ ಜೊತೆ ಕೈ ಜೋಡಿಸಿದ ಪ್ರಮುಖ ಶರಣರಲ್ಲಿ ಒಬ್ಬರು ಎಂದು ಟಿ.ಪಿ.ರಮೇಶ್ ಹೇಳಿದರು.
ಮಡಿಕೇರಿ ತಾಲೂಕು ಬಿಲ್ಲವ ಸಮಾಜದ ಅಧ್ಯಕ್ಷೆ ಲೀಲಾವತಿ ಮಾತನಾಡಿ ವಿದ್ಯೆಯಿಂದ ಸ್ವತಂತ್ರವಾಗಿ ಬದುಕಲು ಸಾಧ್ಯ ಎಂಬುದನ್ನು ನಾರಾಯಣಗುರು ಸಾರಿದ್ದಾರೆ ಎಂದರು. ಕುಳುವ ಸಮಾಜದ ಜಿಲ್ಲಾಧ್ಯಕ್ಷ ಎಚ್.ಪಿ. ಮಹೇಶ್ ಮಾತನಾಡಿ ನುಲಿಯ ಚಂದಯ್ಯ ಅವರ ಆದರ್ಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಮಾತನಾಡಿ ಬ್ರಹ್ಮಶ್ರೀ ನಾರಾಯಣಗುರು ಮತ್ತು ನುಲಿಯ ಚಂದಯ್ಯ ಅವರ ಆದರ್ಶ ಮತ್ತು ಜೀವನದ ಬಗ್ಗೆ ತಿಳಿದುಕೊಳ್ಳುವಂತಾಗಬೇಕು. ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಅವರಂತೆ ನಡೆದುಕೊಳ್ಳಬೇಕು. ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜವರಪ್ಪ ಮಾತನಾಡಿದರು.
ಸರ್ವೋದಯ ಸಮಿತಿ ಜಿಲ್ಲಾ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಜಿ.ಪಂ.ಉಪ ಕಾರ್ಯದರ್ಶಿ ಧನರಾಜ್, ತಹಸೀಲ್ದಾರ್ ಪ್ರವೀಣ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯೂ, ಜಿಲ್ಲಾ ಸಹ ಕಾರ್ಯದರ್ಶಿ ಬೊಳ್ಳಜೀರ ಬಿ.ಅಯ್ಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಕಲಾವಿದ ಬಿ.ಸಿ.ಶಂಕರಯ್ಯ, ಮಣಜೂರು ಮಂಜುನಾಥ್ ಇದ್ದರು.