ಬೆಂಗಳೂರು: ಸಂವಿಧಾನ ಕರಡು ರಚನೆ ಸಂದರ್ಭದಲ್ಲೇ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರೂ ರಾಜ್ಯದಲ್ಲಿ ಬಲವಂತಾಗಿ ಈ ಭಾಷೆ ಹೇರಿಕೆಗೆ ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ 8ನೇ ಪರಿಚ್ಛೇದದಲ್ಲಿ ಎಲ್ಲ 22 ಭಾಷೆಗಳು ರಾಷ್ಟ್ರಭಾಷೆಗಳಾಗಿವೆ. ಈ ಪರಿಚ್ಛೇದದಲ್ಲಿ ಒಳಗೊಳ್ಳದ ನೂರಾರು ಜೀವಂತ ಭಾಷೆಗಳೂ ನಮ್ಮ ನಡುವೆ ಇದೆ. ಈ ಎಲ್ಲ ಭಾಷೆಗಳೂ ಉಳಿದು, ಬೆಳೆಯುವ ಎಲ್ಲ ಹಕ್ಕನ್ನೂ ಒಳಗೊಂಡಿದೆ. ಕೇಂದ್ರ ಸರ್ಕಾರ ತನ್ನ ಆಡಳಿತದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಬಳಸುತ್ತಿದೆ. ಇಂಗ್ಲಿಷ್ ಬಿಟ್ಟು ಹಿಂದಿಯನ್ನು ಮಾತ್ರ ಆಡಳಿತ ಭಾಷೆಯನ್ನಾಗಿ ಮಾಡಿಕೊಳ್ಳುವ ಹುನ್ನಾರ 60ರ ದಶಕದಲ್ಲಿ ವಿಲವಾಗಿದೆ. ತಮಿಳುನಾಡು ಸೇರಿ ದಕ್ಷಿಣ ಭಾರತದ ರಾಜ್ಯಗಳು ಇಂಗ್ಲಿಷ್ ಅನ್ನು ಕೇಂದ್ರದ ಆಡಳಿತ ಭಾಷೆಯನ್ನಾಗಿ ಉಳಿಸಬೇಕೆಂದು ಹೇರಿದ್ದರಿಂದ ಇವೆರಡು ಭಾಷೆಗಳೂ ಆಡಳಿತ ಭಾಷೆಯಾಗಿ ಉಳಿದುಕೊಂಡಿದೆ. ಹೀಗಿರುವಾಗ, ಕೇಂದ್ರ ಸರ್ಕಾರ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವ ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಕೂಡಲೇ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಿ ದೇಶದ ಸಾರ್ವಭೌಮತೆಯನ್ನು ಕಾಪಾಡಬೇಕು. ಸಂವಿಧಾನದ 343ರಿಂದ 351ನೇ ವಿಧಿಗಳನ್ನು ರದ್ದುಪಡಿಸಿ ಎಲ್ಲ ಭಾಷೆಗಳೂ ಒಕ್ಕೂಟದ ದೃಷ್ಟಿಯಲ್ಲಿ ಸಮಾನ ಎಂದು ಸಾರಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ, ಉದ್ಯಮಗಳಲ್ಲಿ ಕನ್ನಡವನ್ನೇ ಆಡಳಿತ ಭಾಷೆಯಾಗಿ ಬಳಸಬೇಕು. ಎಲ್ಲ ಬಗೆಯ ಪತ್ರದ ವ್ಯವಹಾರಗಳೂ ಕನ್ನಡದಲ್ಲೇ ನಡೆಯಬೇಕು. ರಾಜ್ಯದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕು. ಶಾಲಾ ಪಠ್ಯಕ್ರಮಗಳಲ್ಲಿ ಹಿಂದಿ ಕಡ್ಡಾಯ ಕಲಿಕೆ ಕೊನೆಗಾಣಬೇಕು ಎಂದು ನಾರಾಯಣಗೌಡ ಹೇಳಿದ್ದಾರೆ.