ಸುರಪುರ: ನಾಲ್ವಡಿ ರಾಜಾ ವೆಂಕಟಪ್ಪ ನಾಯಕ, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಅವರಂಥ ವೀರರು ಜನಿಸಿದ ನಾಡಲ್ಲಿ ರಾಜಕಾರಣಿಗಳು ತಮ್ಮ ಶಕ್ತಿ ಕಳೆದುಕೊಂಡು ಹೈಕಮಾಂಡ್ ಸಂಸ್ಕೃತಿ ಗುಲಾಮರಾಗಿದ್ದಾರೆ. ಆದ್ದರಿಂದ ಕನ್ನಡದ ಬಲಿಷ್ಠ ಪ್ರಾದೇಶಿಕ ಪಕ್ಷ ರಾಜ್ಯಕ್ಕೆ ಅಗತ್ಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.
ಶೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಆವರಣದಲ್ಲಿ ವೇದಿಕೆ ಶನಿವಾರ ರಾತ್ರಿ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಾವೇಶ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಸುರಪುರ ತಾಲೂಕಿನ ಯುವಕರಲ್ಲಿ ಅರಸರ ಸ್ವಾಭಿಮಾನದ ಕಿಚ್ಚಿದೆ. ಅದರೊಂದಿಗೆ ಕನ್ನಡದ ಸ್ವಾಭಿಮಾನ ತುಂಬಿಕೊಂಡು ಹೋರಾಟಕ್ಕೆ ಮುಂದಾಗುವಂತೆ ಕರೆ ನೀಡಿದರು.
ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿ, ಇಲ್ಲಿ ಕನ್ನಡ ಜಾಗೃತಿ ಸಮಾವೇಶ ಹಮ್ಮಿಕೊಂಡಿರುವುದು ಸಂತೋಷದ ವಿಷಯ. ಕರವೇ ಎಲ್ಲ ಹೋರಾಟಗಳಿಗೂ ಸಾಥ್ ನೀಡುವುದಾಗಿ ಹೇಳಿದರು.
ಕರವೇ ಉಪಾಧ್ಯಕ್ಷ ದಾ.ಪಿ. ಆಂಜಿನಪ್ಪ ಮಾತನಾಡಿ, ರೈಲ್ವೆ ಇಲಾಖೆಯಲ್ಲಿನ 4700 ಡಿ ಗ್ರೂಪ್ ಹುದ್ದೆಗಳು ಕನ್ನಡಿಗರಿಗೆ ಸಿಗುವಂತೆ ಮಾಡಿದ್ದು, ರೈಲ್ವೆ ಪರೀಕ್ಷೆ ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವಂತೆ ಮಾಡಿದ್ದು, ಬೆಳಗಾವಿಯಲ್ಲಿ ಎರಡು ದಶಕದ ನಂತರ ಕನ್ನಡದ ಮೆಯರ್ ಮಾಡಿದ್ದು ಸೇರಿ ಹಲವು ಹಲವು ಹೋರಾಟಗಳನ್ನು ವೇದಿಕೆ ಮಾಡಿದೆ. ಮುಂದೆ ಕರವೇ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಚಿಂತನೆ ಇದ್ದು, ತಾವೆಲ್ಲರೂ ಬೆಂಬಲಿಸಬೇಕು ಎಂದು ಕೋರಿದರು.
ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ) ಕಾರ್ಯಕ್ರಮ ಉದ್ಘಾಟಿಸಿದರು. ದೇವಾಪುರ ಶ್ರೀ ಜಡಿಶಾಂತಲಿಂಗೇಶ್ವರ ಮಠದ ಶಿವಮೂರ್ತಿ ಶಿವಾಚಾರ್ಯ, ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ವೇದಿಕೆ ಪ್ರಧಾನ ಸಂಚಾಲಕ ಬಸವರಾಜ ಪಡಕೋಟೆ, ಉಪಾಧ್ಯಕ್ಷ ಸತೀಶಗೌಡ, ಮಹಿಳಾ ಉಪಾಧ್ಯಕ್ಷೆ ಸಹನಾ ಶೇಖರ, ಶಿವಕುಮಾರ ನಾಟಿಕಾರ, ಸಂತೋಷ ಡಂಬಳ, ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಮಹೇಶ ಕಾಶಿ, ವಿನೋದರಡ್ಡಿ, ಸೋಮನಾಥ ಡೊಣ್ಣಿಗೇರಾ, ಬಲಭೀಮ ನಾಯಕ ಬೈರಿಮಡ್ಡಿ ಇತರರಿದ್ದರು.
ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ ಪ್ರಾಸ್ತಾವಿಕ ಮಾತನಾಡಿದರು. ಶಿವಮೋನಯ್ಯ ಎಲ್.ಡಿ.ನಾಯಕ ಸ್ವಾಗತಿಸಿದರು. ಮಲ್ಲಯ್ಯ ಸ್ವಾಮಿ ಪರಸನಹಳ್ಳಿ ನಿರೂಪಣೆ ಮಾಡಿದರು. ಅನಿಲ ಬಿರಾದಾರ ವಂದಿಸಿದರು.
ವಿವಿಧ ರಂಗಗಳಲ್ಲಿ ಸಾಧನೆಗೈದ ಡಾ.ಹರ್ಷವರ್ಧನ ರಫಗಾರ, ರಾಮಾಚಾರಿ ನಾಗರಾಳ, ನ್ಯಾಯವಾದಿ ಜಿ.ತಮ್ಮಣ್ಣ, ಪತ್ರಕರ್ತ ಗಿರೀಶ ಶಾಬಾದಿ, ಗಾಯಕ ಶರಣುಕುಮಾರ ಜಾಲಹಳ್ಳಿ, ಬಾಲ ವಿಜ್ಞಾನ ಪ್ರಶಸ್ತಿ ಪುರಸ್ಕೃತ ರಂಜಿತಾ ಚಂದ್ರಕಾಂತ ಕೊಣ್ಣೂರ, ಕ್ರೀಡಾಪಟು ಮರೆಪ್ಪ ಗುರಿಕಾರ ಸೇರಿ 21 ಮಹನೀಯರಿಗೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂತರ ಸರಿಗಮಪ ಗಾಯಕರಾದ ಪೃಥ್ವಿ ಭಟ್, ಮೋನಮ್ಮ ಸೋಮನಮರಡಿ, ಮಹೆಬೂಬಸಾಬ್ ಹಾಗೂ ಯಾರ್ ಮಗಾ ಸಿನಿಮಾ ನಟ ರಘು ಪಡಕೋಟೆ ಮತ್ತು ದಿಲೀಪ ಬಾಬು ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿತು. ಇದಕ್ಕೂ ಮುನ್ನ ನಗರದಲ್ಲಿ ಭುವನೇಶ್ವರಿ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. ಸಂಜೆ ದೇವಾಪುರ ಯುವಕರು ಬಿಲ್ವಿದ್ಯೆ ಪ್ರದಶರ್ಿಸಿದರು.