ಜಿಲ್ಲೆ

ನಾರಾಯಣ ಗುರುಗಳು ಜಗತ್ತಿಗೆ ಮಾದರಿ

ಉತ್ತರ ಕನ್ನಡ ಡೆಸ್ಕ್

ಭಟ್ಕಳ: ಕೇರಳದಲ್ಲಿ ಒಂದೇ ಮತ ಒಬ್ಬನೇ ದೇವರು ಎಂಬ ಸಮಾನತಾ ಸಿದ್ಧಾಂತದ ಮೂಲಕ ಸಂಪೂರ್ಣ ಮಾನವ ಜನಾಂಗವನ್ನು ಒಂದುಗೂಡಿಸಲು ನಾರಾಯಣ ಗುರುಗಳ ಆಧ್ಯಾತ್ಮಿಕ ಸಿದ್ಧಾಂತ, ಅವರ ತಪೋಬಲದಿಂದ ಜಗತ್ತಿನ ಮಾದರಿ ಗುರುಗಳಾಗಿದ್ದಾರೆ ಎಂದು ಉಜಿರೆಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ನಿಚ್ಚಲಮಕ್ಕಿ ಆಸರಕೇರಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

ನಾರಾಯಣ ಗುರುಗಳ ಸಿದ್ಧಾಂತ, ತತ್ವ, ಸಮಾಜಕ್ಕೆ ನೀಡಿದ ಜ್ಞಾನ ನಿತ್ಯ ನಿರಂತರ. ಮೇಲ್ವರ್ಗದವರ ಸುಖಕ್ಕಾಗಿ ಕೆಳವರ್ಗದವರ ಹೆಣ್ಣುಮಕ್ಕಳನ್ನು ಬಳಸಿಕೊಳ್ಳಲಾಗುತ್ತಿತ್ತು. ಇಂತಹ ಪರಿಸ್ಥಿತಿಯಿಂದ ಹಿಂದುಳಿದ ವರ್ಗವನ್ನು ರಕ್ಷಿಸಿ ಅವರಲ್ಲಿ ಜ್ಞಾನ ಭಿತ್ತಿ ಮಾನವ ಸಂಕುಲದ ಏಳಿಗೆಗಾಗಿ ನಾರಾಯಣ ಗುರುಗಳು ಶ್ರಮಿಸಿದ್ದಾರೆ. ಸನ್ಯಾಸಿಗಳು ರಾಜಕೀಯ ಮಾಡಬಾರದು. ಶೈಕ್ಷಣಿಕವಾಗಿ ನಮ್ಮವರನ್ನು ಜಾಗ್ರತಗೊಳಿಸಬೇಕು ಎಂದರು.

ಮಂಗಳೂರಿನ ಶ್ರೀ ಗೋಕರ್ಣ ನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ ಆರ್. ಮಾತನಾಡಿ, ನಾರಾಯಣ ಗುರುಗಳ ವಿಚಾರಗಳು ಭಾಷಣಕ್ಕೆ ಮಾತ್ರ ಸಿಮೀತವಾಗದೆ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನಿಚ್ಚಲಮಕ್ಕಿ ಆಸರಕೇರಿ ದೇವಸ್ಥಾನದ ಗುರುಮಠದ ಅಧ್ಯಕ್ಷ ಕೃಷ್ಣಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಸುಬ್ರಾಯ ನಾಯ್ಕ, ಶ್ರೀ ನಾರಾಯಣ ಗುರು ಜಯಂತ್ಯುತ್ಸವದ ಸಂಚಾಲಕ ಮನಮೋಹನ ನಾಯ್ಕ, ಉಪಾಧ್ಯಕ್ಷರಾದ ಭವಾನಿಶಂಕರ ನಾಯ್ಕ, ಸುಬ್ರಾಯ ನಾಯ್ಕ ಇದ್ದರು. ಪರಮೇಶ್ವರ ನಾಯ್ಕ, ಗಂಗಾಧರ ನಾಯ್ಕ, ನಾರಾಯಣ ನಾಯ್ಕ, ಮಂಜುನಾಥನಾಯ್ಕ ಕಾರ್ಯಕ್ರಮ ನಿರೂಪಿಸಿದರು.