ನಾರಾವಿ ಭಗವಾನ್ ಶ್ರೀ ಧರ್ಮನಾಥಸ್ವಾಮಿ ಬಸದಿ 
ಜಿಲ್ಲೆ

ಮೇ 3ರಿಂದ ನಾರಾವಿ ಬಸದಿ ಪ್ರತಿಷ್ಠಾಪನೆ :ಮೂರು ದಿನ ಸಂಭ್ರಮ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸುಮಾರು 900 ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ನಾರಾವಿ ಬಸದಿ ಜೀರ್ಣೋದ್ಧಾರಗೊಂಡಿದ್ದು, ಮೇ 3, 4 ಮತ್ತು 5ರಂದು ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾಪನಾ ಮಹೋತ್ಸವ ಸಂಭ್ರಮ-ಸಡಗರದಿಂದ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ 7ರಿಂದ ಮಧ್ಯಾಹ್ನದವರೆಗೆ ಬಸದಿಯಲ್ಲಿ ಧಾರ್ಮಿಕ ವಿಧಿವಿಧಾನಗಳು, ಪೂಜೆ, ಆರಾಧನೆಗಳು ನಡೆಯುತ್ತವೆ. ಅಪರಾಹ್ನ 2ರಿಂದ 5ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿವೆ.

3ರಂದು ಸಂಜೆ 6 ಗಂಟೆಯಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿ ಮತ್ತು ನರಸಿಂಹರಾಜಪುರ ಜೈನಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.

4ರಂದು ಸಂಜೆ 6ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿ ಮತ್ತು ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಮೂಡುಬಿದಿರೆ ನೋಟರಿ ಶ್ವೇತಾ ಜೈನ್ ಧಾರ್ಮಿಕ ಉಪನ್ಯಾಸ ನೀಡುವರು. ಕಾರ್ಕಳದ ವಕೀಲ ಎಂ.ಕೆ.ವಿಜಯಕುಮಾರ್ ಮತ್ತು ಮೂಡುಬಿದಿರೆಯ ಡಾ.ಎಂ.ಮೋಹನ ಆಳ್ವ ಶುಭಾಶಂಸನೆ ಮಾಡುವರು.

5ರಂದು ಭಾನುವಾರ ಸಂಜೆ 6ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. ಮುನಿರಾಜ ರೆಂಜಾಳ ಧಾರ್ಮಿಕ ಉಪನ್ಯಾಸ ನೀಡುವರು. ಧರ್ಮಸ್ಥಳದ ಡಿ.ಸುರೇಂದ್ರಕುಮಾರ್ ಮತ್ತು ಅನಿತಾ ಸುರೇಂದ್ರಕುಮಾರ್ ಶುಭಾಶಂಸನೆ ಮಾಡುವರು. ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸುವರು.

ಅನಂತಶಾಂತಿ ತೀಥರ್ಂಕರ ವನ

ಭಗವಾನ್ ಧರ್ಮನಾಥಸ್ವಾಮಿ, ಭಗವಾನ್ ಚಂದ್ರನಾಥಸ್ವಾಮಿ, ಭಗವಾನ್ ಶಾಂತಿನಾಥಸ್ವಾಮಿ, ಭಗವಾನ್ ಅನಂತನಾಥಸ್ವಾಮಿ ಮತ್ತು ಮಹಾಮಾತೆ ಪದ್ಮಾವತಿ ದೇವಿ ಸಾನ್ನಿಧ್ಯ ಇಲ್ಲಿದೆ. ಬಸದಿಯ ಎದುರುಗಡೆ ಅನತಿ ದೂರದಲ್ಲಿ ಅನಂತಶಾಂತಿ ತೀಥರ್ಂಕರ ವನ ಕಣ್ಮನ ಸೆಳೆಯುತ್ತಿದೆ.

ಎಲ್ಲ ಸಿದ್ಧತೆ ಪೂರ್ಣ

ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿ ಮತ್ತು ಮೂಡುಬಿದಿರೆ ಜೈನಮಠದ ಪೂಜ್ಯ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಊರ-ಪರವೂರ ಶ್ರಾವಕರು-ಶ್ರಾವಕಿಯರ ಸಹಕಾರದಲ್ಲಿ ಭವ್ಯ ಸಮಾರಂಭ ನಡೆಯಲಿದ್ದು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.