ಮದ್ದೂರು ಪಟ್ಟಣದಲ್ಲಿ ಉಗ್ರ ನರಸಿಂಹಸ್ವಾಮಿಯ ಬ್ರಹ್ಮೋತ್ಸವ (ಬ್ರಹ್ಮ ರಥೋತ್ಸವ) ಸೋಮವಾರ ಸಂಭ್ರಮದಿಂದ ನಡೆಯಿತು.  
ಜಿಲ್ಲೆ

ವಿಜೃಂಭಣೆಯ ಉಗ್ರ ನರಸಿಂಹಸ್ವಾಮಿ ಬ್ರಹ್ಮೋತ್ಸವ

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿ ಬ್ರಹ್ಮೋತ್ಸವ (ಬ್ರಹ್ಮ ರಥೋತ್ಸವ) ಸೋಮವಾರ ಭಕ್ತರ ಸಮ್ಮುಖದಲ್ಲಿ ಸಡಗರ ಮತ್ತು ಸಂಭ್ರಮದಿಂದ ನಡೆಯಿತು.

ರಥೋತ್ಸವಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಚಾಲನೆ ನೀಡಿದರು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗ ಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸುಡುವ ಬಿಸಿಲನ್ನು ಲೆಕ್ಕಿಸದೆ ಕೋಟೆ ಬೀದಿಯ ಪ್ರಮುಖ ಬೀದಿಗಳಲ್ಲಿ ದೇವರ ಪರ ಜಯಘೋಷ ಕೂಗುತ್ತ ತೇರು ಎಳೆದರು. ರಥೋತ್ಸವ ವೇಳೆ ಹಣ್ಣು-ದವನ ಎಸೆದರು.

ರಥೋತ್ಸವ ಅಂಗವಾಗಿ ಉಗ್ರ ನರಸಿಂಹಸ್ವಾಮಿ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಭಕ್ತರಿಗೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ದೇಗುಲ ಆವರಣದಲ್ಲಿ ಮಜ್ಜಿಗೆ, ಪಾನಕ, ಹೆಸರುಬೇಳೆ, ಬಿಸಿಬೇಳೆ ಬಾತ್, ಮೊಸರನ್ನ, ಟೊಮ್ಯಾಟೊ ಬಾತ್, ಪುಳಿಯೊಗರೆ, ಸಿಹಿ ಪೊಂಗಲ್ ನೀಡಲಾಯಿತು.

ದೇವರ ದಯೆಯಿಂದ ಉತ್ತಮ ಮಳೆಯಾಗಲಿ: ಉಗ್ರ ನರಸಿಂಹಸ್ವಾಮಿ ದಯೆಯಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ಪಟ್ಟಣದ ಶ್ರೀ ಉಗ್ರನರಸಿಂಹಸ್ವಾಮಿ ರಥೋತ್ಸವಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಕೆರೆ, ಕಟ್ಟೆಗಳು ಹಾಗೂ ಜಲ ಮೂಲಗಳು ಬರಿದಾಗಿದೆ. ಉತ್ತಮ ಮಳೆಯಾಗಿ ಶಿಂಷಾ ನದಿಯಲ್ಲಿ ನೀರು ಉಕ್ಕಿ ಹರಿಯಲಿ ಎಂದು ಪ್ರಾರ್ಥನೆ ಸಲ್ಲಿಸೋಣ ಎಂದರು.

ದೇಗುಲದ ಪ್ರಧಾನ ಅರ್ಚಕ ಟಿ.ನಾರಾಯಣ್ ಅಯ್ಯಂಗಾರ್, ಪಾರುಪತ್ತೇದಾರ್ ಕೆ.ಆರ್.ಮಂಜುನಾಥ್, ಉಪ ವಿಭಾಗಧಿಕಾರಿ ಬಿ.ಆರ್.ಮಹೇಶ್, ಉಪ ತಹಸೀಲ್ದಾರ್ ಸೋಮಶೇಖರ್, ಶಿರಸ್ತೇದಾರ್ ಲಕ್ಷ್ಮಿನರಸಿಂಹನ್, ರಾಜಸ್ವ ನಿರೀಕ್ಷಕ ಜಗದೀಶ್, ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ ಇತರರು ಇದ್ದರು.