ಜಿಲ್ಲೆ

ನರಸಿಂಹಯ್ಯ ಪ್ರಾಧಿಕಾರ ರಚನೆಗೆ ಸಿಎಂ ಸಮ್ಮತಿ

ಎನ್.ವೆಂಕಟೇಶ್

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾಹಿತಿ ಹೊಸೂರು ಗ್ರಾಮದಲ್ಲಿ ಶತಮಾನೋತ್ಸವ ಸಂಭ್ರಮ

ಗೌರಿಬಿದನೂರು: ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ತಾಲೂಕಿನ ಹೊಸೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವ ಹಾಗೂ ಅವರು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರವಾಸೋದ್ಯಮ ಮತ್ತು ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ‘ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರ’ ರಚಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ವಿದೇಶದಲ್ಲಿ ಓದಿದ ನರಸಿಂಹಯ್ಯ ದೂರದೃಷ್ಟಿಯೊಂದಿಗೆ ಜ್ಞಾನಭಾರತಿ ಕ್ಯಾಂಪಸ್ ಅನ್ನು 1200 ಎಕರೆ ಪ್ರದೇಶದಲ್ಲಿ ಕಟ್ಟಿ ಬೆಳೆಸಿದರು. ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಅವರು ಕಷ್ಟದಿಂದ ಮೇಲೆ ಬಂದ ವ್ಯಕ್ತಿ. ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ತವರೂರಿನಲ್ಲಿ ಕೆಪಿಎಸ್ ಶಾಲೆ ಪ್ರಾರಂಭಕ್ಕೆ ಆದ್ಯತೆ ನೀಡಲಾಗುವುದು. ಅವರ ಹೆಸರಿನಲ್ಲಿ ವಿಜ್ಞಾನ ಪಾರ್ಕ್ ಮತ್ತು ಕಲಾಭವನ ಸ್ಮಾರಕ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಿ ಅವರ ಮೌಲ್ಯಗಳನ್ನು ಸಾರಲಾಗುವುದು ಎಂದರು.

ಶಿಕ್ಷಣ ಕ್ಷೇತ್ರಕ್ಕೆ ನರಸಿಂಹಯ್ಯ ಅವರ ಕೊಡುಗೆ ಅಪಾರ. ಅವರು ಕಟ್ಟಿಬೆಳೆಸಿದ ನ್ಯಾಷನಲ್ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಲು ಈ ಹಿಂದೆ ಸಾಕಷ್ಟು ಒತ್ತಡ ಹಾಕಬೇಕಿತ್ತು. ಸಂಸ್ಥೆಯ ಹಾಲಿ ಆಡಳಿತ ಮಂಡಳಿ ಉತ್ತಮ ಕೆಲಸದ ಮೂಲಕ ಸಂಸ್ಥೆಯ ಘನತೆಯನ್ನು ಹಿಂದಿನಂತೆ ಕಾಪಾಡಿಕೊಂಡು ಹೋಗಬೇಕು ಎಂದರು.

ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಮಾತನಾಡಿ, ಡಾ.ಎಚ್.ನರಸಿಂಹಯ್ಯ ಪ್ರಾಧಿಕಾರ ರಚಿಸುವ ಜತೆಗೆ ವಿಜ್ಞಾನ ಪಾರ್ಕ್, ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಶಾಲೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಸರ್ಕಾರ ಅನುದಾನ ಒದಗಿಸಬೇಕು ಎಂದರು.

ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ನರಸಿಂಹಯ್ಯ ಅವರು ಓದಿದ ಶಾಲೆಯನ್ನು ಕರ್ನಾಟಕ ಮಾದರಿ ಪಬ್ಲಿಕ್ ಶಾಲೆಯನ್ನಾಗಿ ಮಾಡಬೇಕೆಂಬುದು ನಮ್ಮ ಸಂಕಲ್ಪವಾಗಿದೆ. ಅದಕ್ಕೆ ಬೇಕಾದ ಸ್ಥಳಾವಕಾಶವಿದೆ. ಎಲ್ಕೆಜಿಯಿಂದ ಪಿಯುಸಿವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಶಾಲೆ ತೆರೆಯಬೇಕು. ಸರ್ಕಾರದ ಜತೆಗೆ ಹಳೇ ವಿದ್ಯಾರ್ಥಿಗಳು ಹಾಗೂ ಡಾ.ಎಚ್.ಎನ್.ಅಭಿಮಾನಿಗಳ ಸಂಘ ಕೈ ಜೋಡಿಸಲಿದೆ ಎಂದರು.

ಪ್ರಗತಿಪರ ಚಿಂತಕ, ಶಾಲೆಯ ಹಳೆಯ ವಿದ್ಯಾರ್ಥಿ ಡಾ.ವಾಸು ಮಾತನಾಡಿ, ಇಂದು ಸರ್ಕಾರಿ ಶಾಲೆಗಳು ಎರಡನೇ ದರ್ಜೆಯ ಶಾಲೆಗಳಾಗುತ್ತಿವೆ. ಪ್ರಾಥಮಿಕ ಶಾಲೆಯ ಶಿಕ್ಷಣದ ಕಲ್ಪನೆ ಬದಲಾಗಬೇಕು. ನಾಡು ಕಂಡ ಅಪ್ರತಿಮ ವಿಚಾರವಾದಿ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಅವರ ಕನಸು ನನಸು ಮಾಡುವ ಸಂಕಲ್ಪವನ್ನು ನಾವೆಲ್ಲ ಮಾಡಬೇಕು ಎಂದರು.

ಎನ್‌ಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಚ್.ಎಸ್. ಸುಬ್ರಮಣ್ಯಂ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ನಿಟ್ಟಾಲಿ, ಎಸ್ಪಿ ಕುಶಾಲ್ ಚೌಕಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ತೇಜ್ ಆನಂದ್ ರೆಡ್ಡಿ, ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ಮಾಜಿ ಶಾಸಕಿ ಎನ್. ಜ್ಯೋತಿ ರೆಡ್ಡಿ, ಗ್ರಾಪಂ ಅಧ್ಯಕ್ಷೆ ಗೀತಾ ನಾಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಎಚ್. ವಿ. ತಿಮ್ಮಪ್ಪ, ಹಿರಿಯ ವಿದ್ಯಾರ್ಥಿಗಳಾದ ಡಾ.ಎಚ್.ಎಸ್. ಶಶಿಧರ್, ಎಚ್. ಎಲ್. ವಿ. ವೆಂಕಟೇಶ್, ಬಿ.ಎಲ್. ಶಿವರಾಮ ರೆಡ್ಡಿ ಇತರರು ಇದ್ದರು.

ಎಚ್ಚೆನ್ ಓದಿದ ಶಾಲೆ ಜ್ಞಾನ ವೃಕ್ಷವಾಗಲಿ

ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ನರಸಿಂಹಯ್ಯಅವರು ಸರಳ, ಸಜ್ಜನಿಕೆ, ವೈಚಾರಿಕತೆ ಸಿದ್ಧಾಂತಗಳನ್ನು ಪಾಲಿಸಿಕೊಂಡು ಬಂದರು. ಮೂಢನಂಬಿಕೆಗಳ ಬಗ್ಗೆ ಅವರಲ್ಲಿ ಅಸಮಾಧಾನವಿತ್ತು. ನರಸಿಂಹಯ್ಯ ಅವರ ಹಾದಿಯನ್ನೇ ಸಿದ್ದರಾಮಯ್ಯ ಅನುಸರಿಸುತ್ತಿದ್ದಾರೆ. ಮಕ್ಕಳನ್ನು ಮೌಢ್ಯ, ಜಾತಿ ವ್ಯವಸ್ಥೆಗಳಿಂದ ದೂರವಿಡಬೇಕು. ಎಚ್ಚೆನ್ ಓದಿದ ಶಾಲೆ ಜ್ಞಾನ ವೃಕ್ಷವಾಗಬೇಕು, ಮತ್ತಷ್ಟು ಅಭಿವೃದ್ಧಿಯಾಗಬೇಕು. ಶಾಲೆಗೆ ವಿಶಾಲವಾದ ಸ್ಥಳಾವಕಾಶವಿದ್ದು, ಕೆಪಿಎಸ್ ಶಾಲೆಗೆ ಸರ್ಕಾರ ಅನುಮತಿ ನೀಡಬೇಕು. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಇಂಗ್ಲಿಷ್ ಬೋಧನೆ ಮಾಡಬೇಕು. ರಾಜ್ಯದ ಪ್ರತಿ ಶಾಲೆಗೂ ಆಂಗ್ಲ ಭಾಷೆ ಬೋಧಿಸುವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಆಗ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತದೆ ಎಂದರು.

ಸಿಎಂ ಭೇಟಿ ರದ್ದು

ಭಾನುವಾರದ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಸಿಎಂ ಆಗಮಿಸಲಿಲ್ಲ. ಕಾಲು ಪೆಟ್ಟಾಗಿರುವುದರಿಂದ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂಬ ವಿಷಯ ತಿಳಿದು ಎಲ್ಲರೂ ನಿರಾಸೆಗೊಂಡರು. ಮುಖ್ಯಮಂತ್ರಿ ಆಗಮಿಸುತ್ತಾರೆ ಎಂಬ ಕಾರಣಕ್ಕೆ ಹೆಲಿಪ್ಯಾಡ್ ನಿರ್ಮಾಣ, 500ಕ್ಕೂ ಅಧಿಕ ಮಂದಿ ಬಿಗಿ ಪೊಲೀಸ್ ಬಂದೋಬಸ್ತ್, ಆಕರ್ಷಕ ವೇದಿಕೆ ಜತೆಗೆ 10 ಸಾವಿರ ಜನ ಕೂರಲು ಆಸನ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಹಾಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ, ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹಾಗೂ ಜಿಪಂ ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಬೆಂಬಲಿಗರು ಪೈಪೋಟಿಗೆ ಬಿದ್ದವರಂತೆ ಮುಖ್ಯಮಂತ್ರಿ ಸ್ವಾಗತಿಸುವ ್ಲೆಕ್ಸ್ ಅಳವಡಿಸಿದ್ದರು. ನರಸಿಂಹಯ್ಯ ಅವರು ವ್ಯಾಸಂಗ ಮಾಡಿರುವ ಶತಮಾನೋತ್ಸವದ ಶಾಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಬಳಿ ಅನುದಾನ ಕೋರಲು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ವಿ.ಮಂಜುನಾಥ್ ನೇತೃತ್ವದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆಯಲ್ಲಿ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಬೇಕಾಯಿತು.

"ನರಸಿಂಹಯ್ಯ ಅವರು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಆದ್ದರಿಂದ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಹೊಸೂರು, ಗೌರಿಬಿದನೂರು, ಬಾಗೇಪಲ್ಲಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರ ಆದರ್ಶ ಮೌಲ್ಯಗಳನ್ನು ಶಿಕ್ಷಣ ಸಂಸ್ಥೆಗಳು ಕಾಪಾಡಿಕೊಂಡು ಹೋಗಬೇಕು. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು." - ನಾಡೋಜ ಹಂಪ ನಾಗರಾಜಯ್ಯ, ಹಿರಿಯ ಸಾಹಿತಿ "ನರಸಿಂಹಯ್ಯನವರು ಜಿಲ್ಲೆಯಲ್ಲಿ ಹುಟ್ಟಿದ ಕರ್ನಾಟಕ ರತ್ನ. ಜಿಲ್ಲೆಯವರೇ ಆದ ಸರ್‌ಎಂ ವಿಶ್ವೇಶ್ವರಯ್ಯ ಭಾರತ ರತ್ನ ಎಂಬುದು ನಮ್ಮ ಹೆಮ್ಮೆ. ಇಬ್ಬರೂ ವೈಜ್ಞಾನಿಕ, ವೈಚಾರಿಕತೆ ಹಾಗೂ ಸರಳ ಸಜ್ಜನಿಕೆಯ ಹಾದಿಯಲ್ಲಿ ಸಾಗಿದರು. ಇಬ್ಬರೂ ಬಡತನದ ಬೇಗೆಯಲ್ಲಿ ಬೆಳೆದು ಸಾಧನೆಗೈದವರು. ಶಿಕ್ಷಣ ಹಾಗೂ ಆರೋಗ್ಯ ನೀಡಿದಾಗ ಮಾತ್ರ ಆದರ್ಶ ಸಮಾಜ ನಿರ್ಮಿಸಲು ಸಾಧ್ಯ ಎಂದು ಇಬ್ಬರೂ ನಂಬಿದ್ದರು. ಇಬ್ಬರೂ ಮಹನೀಯರ ಆದರ್ಶಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ." - ಡಾ.ಕೆ.ಸುಧಾಕರ್, ಸಂಸದ