ಜಿಲ್ಲೆ

ಸಾಲ ಮರು ಪಾವತಿಯಲ್ಲಿ ಮಹಿಳೆಯರು ಮಾದರಿ

Kolar

ನರಸಾಪುರ: ನಷ್ಟದಲ್ಲಿದ್ದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ದೊಡ್ಡದು, ಬ್ಯಾಂಕಿನಿಂದ ಪಡೆದ ಆರ್ಥಿಕ ನೆರವನ್ನು ಸದುಪಯೋಗ ಪಡಿಸಿಕೊಂಡು ಸಕಾಲಕ್ಕೆ ಸಾಲದ ಕಂತು ಪಾವತಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಪ್ರಶಂಸಿಸಿದರು.

ಡಿಸಿಸಿ ಬ್ಯಾಂಕ್ ಹಾಗೂ ತಾಲೂಕಿನ ನರಸಾಪುರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಬುಧವಾರ ನರಸಾಪುರದ ಭತ್ತೇಶ್ವರ ದೇವಾಲಯ ಆವರಣದಲ್ಲಿ 44 ಮಹಿಳಾ ಸ್ವಸಹಾಯ ಸಂಘಗಳಿಗೆ 2.20 ಕೋಟಿ ರೂ. ಬಡ್ಡಿರಹಿತ ಸಾಲ ವಿತರಿಸಿ ಮಾತನಾಡಿದರು.

ಮಹಿಳಾ ಸ್ವಸಹಾಯ ಸಂಘಗಳಿಗೆ ಬ್ಯಾಂಕಿನಿಂದ ಸಾಲ ಯೋಜನೆ ಜಾರಿಗೆ ತಂದಾಗ ಅನೇಕರು ಸಾಲ ವಸೂಲಾತಿ ಕಷ್ಟವಾಗುತ್ತದೆ, ಬ್ಯಾಂಕಿಗೆ ನಷ್ಟವಾಗಬಹುದೆಂದು ಅನುಮಾನ ವ್ಯಕ್ತಪಡಿಸಿದ್ದರು, ಆದರೆ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡುತ್ತಿರುವುದಲ್ಲದೆ, ಉಳಿತಾಯ ಖಾತೆಯಲ್ಲಿ ಹಣ ಜಮಾ ಮಾಡುವ ಮೂಲಕ ನಂಬಿಕೆಗೆ ಅರ್ಹರಾಗಿದ್ದಾರೆ ಎಂದರು.

ಮಾಜಿ ಸಚಿವ, ಜಿಲ್ಲೆಯ ಧೀಮಂತ ರಾಜಕಾರಣಿ ದಿ.ಸಿ.ಬೈರೇಗೌಡ ಅವರು ವೋಟಿಗಾಗಿ ಹಣ ನೀಡಿದವರಲ್ಲ, ಕೇವಲ ಎಲೆ ಅಡಿಕೆ ನೀಡಿ ಮತ ಪಡೆದು ಜನ ಪರ ಕೆಲಸ ಮಾಡಿದ್ದಾರೆ. ವೋಟನ್ನು ಹಣಕ್ಕೆ ಮಾರಿಕೊಂಡಲ್ಲಿ ರಾಜಕಾರಣಿಗಳನ್ನು ಪ್ರಶ್ನಿಸುವ ನೈತಿಕತೆ ಇರುವುದಿಲ್ಲ ಎಂದರು.

ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಏಳು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ನಶಿಸಿಹೋಗಿತ್ತು, ಯಾರಿಗೂ ಒಂದು ರೂ. ಸಾಲ ನೀಡುವ ಶಕ್ತಿ ಇಲ್ಲದೇ ದಿವಾಳಿಯಾಗಿತ್ತು, ಆದರೆ ಇಂದು ಸಾವಿರಾರು ಕೋಟಿ ರೂ. ಸಾಲ ನೀಡುವ ಶಕ್ತಿ ಬಂದಿದೆ, ಅದಕ್ಕೆ ಮಹಿಳೆಯರೇ ಕಾರಣ ಎಂದರು.

ಸಾಲ ವಿತರಣೆ ಆಂದೋಲನ: ಕೋಲಾರ ತಾಲೂಕಿನಾದ್ಯಂತ ಪ್ರತಿ ಕುಟುಂಬಕ್ಕೂ ಡಿಸಿಸಿ ಬ್ಯಾಂಕ್ ಬಡ್ಡಿರಹಿತ ಸಾಲ ತಲುಪಿಸುವ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಿದೆ. ಪಡಿತರಕ್ಕೆ ಸೀಮಿತವಾಗಿದ್ದ ನರಸಾಪುರ ಸೊಸೈಟಿಯಿಂದ 24 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ವಿವರಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷೆ ರಾಜೇಶ್ವರಿ, ನರಸಾಪುರ ಎಸ್‌ಎಫ್‌ಸಿಎಸ್ ಅಧ್ಯಕ್ಷ ಕೆ.ಎಂ.ಮುನಿರಾಜು, ಉಪಾಧ್ಯಕ್ಷ ವಾಸು, ನಿರ್ದೇಶಕರಾದ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಕೆಇಬಿ ಚಂದ್ರಣ್ಣ, ಈರಣ್ಣ, ಚೆನ್ನರಾಯಪ್ಪ, ಗ್ರಾಪಂ ಸದಸ್ಯ ನಟರಾಜ್, ಮಾಜಿ ಅಧ್ಯಕ್ಷ ಬಸವರಾಜ್, ಸಿಇಒ ನವೀನ್ ಕುಮಾರ್ ಮತ್ತಿತರರಿದ್ದರು.