ಜಿಲ್ಲೆ

ಹಳ್ಳದಲ್ಲಿ ಕೊಚ್ಚಿ ಹೋಗಿ ಇಬ್ಬರು ಜಲಸಮಾಧಿ

ನರಗುಂದ: ತಾಲೂಕಿನಾದ್ಯಂತ ಭಾನುವಾರ ಸಂಜೆಯಿಂದ ಸುರಿದ ನಿರಂತರ ಧಾರಾಕಾರ ಮಳೆಗೆ ಇಬ್ಬರು ಬೈಕ್ ಸವಾರರು ಹಳ್ಳದಲ್ಲಿ ಕೊಚ್ಚಿ ಹೋಗಿ ಜೀವಂತ ಜಲಸಮಾಧಿ ಆಗಿರುವ ಘಟನೆ ತಾಲೂಕಿನ ಹುಣಸೀಕಟ್ಟಿ ಗ್ರಾಮದ ಬಳಿಯ ವಡ್ಡಿನ ಹಳ್ಳದಲ್ಲಿ ನಡೆದಿದೆ.

ಸಾಫ್ಟವೇರ್ ಇಂಜಿನಿಯರ್ ಆಗಿದ್ದ ಹುಣಸೀಕಟ್ಟಿಯ ಮಣಿಕಂಠ ಅಶೋಕ ಮಲ್ಲಾಪೂರ (28), ಶಿವಾನಂದ ಅಶೋಕ ಅವರಾದಿ (24) ಮೃತ ದುರ್ದೈವಿಗಳು. ಮೃತ ಮಣಿಕಂಠ ಬಳ್ಳಾರಿ ಜಿಂದಾಲ್ ಫ್ಯಾಕ್ಟರಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. 2 ವರ್ಷದ ಹಿಂದೆ ಹೊಸಪೇಟೆ ಜಿಲ್ಲೆ ಹೊಳೆಮಡ್ಲೂರ ಗ್ರಾಮದ ಸುಚಿತ್ರ ಅವರೊಂದಿಗೆ ವಿವಾಹವಾಗಿತ್ತು. 1 ವರ್ಷದಿಂದ ಜಿಂದಾಲ್ ಕಂಪನಿಯವರು ವರ್ಕ್ ಫ್ರಂ ಹೋಂ ಕೆಲಸ ನೀಡಿದ್ದರಿಂದ 8 ತಿಂಗಳಿಂದ ಮಣಿಕಂಠ ಸ್ವಗ್ರಾಮ ಹುಣಸೀಕಟ್ಟಿಯಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ. ಪತ್ನಿ ಸುಚಿತ್ರಾ ನರಗುಂದದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಗ್ಗೆ ನರಗುಂದಕ್ಕೆ ಆಗಮಿಸಿದ್ದ ಸುಚಿತ್ರ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ವಿಪರೀತ ಮಳೆ ಸುರಿಯುತ್ತಿರುವ ಹಿನ್ನೆಲೆ ರಾತ್ರಿ 9 ಗಂಟೆ ಸುಮಾರಿಗೆ ಮಣಿಕಂಠ ಪತ್ನಿಯನ್ನು ಕರೆದುಕೊಂಡು ಹೋಗಲು ಸ್ನೇಹಿತ ಶಿವಾನಂದನ ಜತೆಗೆ ಬೈಕ್​ನಲ್ಲಿ ನರಗುಂದಕ್ಕೆ ಬರುತ್ತಿದ್ದ. ಈ ವೇಳೆ ನರಗುಂದ ಮತ್ತು ಹುಣಸೀಕಟ್ಟಿ ಗ್ರಾಮದ ಮಧ್ಯದಲ್ಲಿರುವ ವಡ್ಡಿನ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಬೈಕ್ ಹಿಂಬದಿ ಸವಾರ ಶಿವಾನಂದನ ಶವ ಸೋಮವಾರ ಬೆಳಗ್ಗೆ 1 ಕಿಲೋ ಮೀಟರ್ ದೂರದ ಜಾಲಿಮುಳ್ಳಿನ ಕಂಟಿಯಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ, ಪೊಲೀಸ್, ಕಂದಾಯ ಇಲಾಖೆ ಹಾಗೂ ಗ್ರಾಮಸ್ಥರ ನಿರಂತರ ಶೋಧ ಕಾರ್ಯ ನಡೆಸಿ ಕಲಕೇರಿ ಬಳಿಯ ದೊಡ್ಡ ಹಳ್ಳದಲ್ಲಿ ಮಣಿಕಂಠನ ಶವ ಪತ್ತೆ ಹಚ್ಚಿದ್ದಾರೆ.

ಘಟನಾ ಸ್ಥಳಕ್ಕೆ ಶಾಸಕ ಸಿ.ಸಿ. ಪಾಟೀಲ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹುಣಸೀಕಟ್ಟಿಯ ವಡ್ಡಿನ ಹಳ್ಳದಲ್ಲಿ ವಿಪರೀತ ಹೂಳು ತುಂಬಿದೆ. ಕಂದಾಯ ಇಲಾಖೆ ವಿಶೇಷ ಅನುದಾನದಡಿ ಹಳ್ಳದಲ್ಲಿನ ಹೂಳೆತ್ತಬೇಕು. ಪ್ರಕೃತಿ ವಿಕೋಪದಡಿ ಎರಡ್ಮೂರು ದಿನಗಳಲ್ಲಿ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಸೂಚಿಸಿದರು. ಚಿಕ್ಕ ವಯಸ್ಸಿನ ಮಕ್ಕಳನ್ನು ಕಳೆದುಕೊಂಡಿರುವ ಎರಡೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ತಾಪಂ ಇಒ ಎಸ್.ಕೆ. ಇನಾಂದಾರ, ಪಿಡಿಒ ವಿ.ಆರ್. ರಾಯನಗೌಡ್ರ, ಸಿಪಿಐ ಮಂಜುನಾಥ ನಡುವಿನಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.