ಜಿಲ್ಲೆ

ಕೊಡಗಿನ ನೆಲ ವಿಭಿನ್ನ ಸಂಸ್ಕೃತಿಗೆ ಹೆಸರಾಗಿದೆ

ಎ. ಆರ್. ರಘುರಾಮ

ನಾಪೋಕ್ಲು: ಸನಾತನ ಪರಂಪರೆಯೊಂದಿಗೆ ಆಚಾರ, ವಿಚಾರಗಳನ್ನೂ ಹೊಂದಿರುವ ಹಿರಿಮೆ ಕೊಡಗಿಗೆ ಇದೆ ಎಂದು ಭಾಗಮಂಡಲ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ. ಜೆ. ದಿವಾಕರ ಹೇಳಿದರು.

ಕೊಡಗು ಜಿಲ್ಲಾ ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೋರಂಗಾಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಡಾ. ಇರುವೈಲು ರಘುರಾಮ ಅಸ್ರಣ್ಣ ಮತ್ತು ಲೀಲಾ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊಡಗಿನ ನೆಲ- ಜಲವನ್ನು ಕವಿ ಪಂಜೆ ಮಂಗೇಶರಾಯರು ದೇವ ಸನ್ನಿಧಿ ಎಂದು ಬಣ್ಣಿಸಿದ್ದಾರೆ. ಶುದ್ಧ ಗಾಳಿ, ಸ್ವಚ್ಛ ಪರಿಸರ ಈ ಜಿಲ್ಲೆಯಲ್ಲಿದೆ. ಹುಟ್ಟಿನಿಂದ ಸಾವಿನವರೆಗೆ ನಮ್ಮಲ್ಲಿ ವಿಭಿನ್ನ ಆಚರಣೆಗಳಿವೆ. ಸಾವು- ನೋವಿನಲ್ಲೂ ಸಹಾಯ ಮಾಡುವ ಪದ್ಧತಿ ಇಂದಿಗೂ ಹಸಿರಾಗಿದೆ. ಹಾಗಾಗಿ ಕೊಡಗು ಎಂಬುದು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ನಾಡು ಎಂದು ಅವರು ಬಣ್ಣಿಸಿದರು.

ಕನ್ನಡಕ್ಕೆ ಆದ್ಯತೆ: ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ವ್ಯವಸ್ಥಾಪಕ ಚೀಯಕಪೂವಂಡ ಮಿಥುನ ಚಂಗಪ್ಪ ಮಾತನಾಡಿ, ಆಂಗ್ಲಭಾಷೆಯು ವ್ಯವಹಾರಕ್ಕೆ ಬೇಕು. ಅನ್ನದ ಭಾಷೆ, ಮಣ್ಣಿನ ಭಾಷೆ ಕನ್ನಡಕ್ಕೆ ನಾವು ವಿಶೇಷ ಆದ್ಯತೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ದತ್ತಿ ಸ್ಥಾಪನೆ ಮಾಡಿದ ಡಾ. ್ ದುರ್ಗಾ ಪ್ರಸಾದ ಅವರು ತಮ್ಮ ತಂದೆ- ತಾಯಿಯನ್ನು ಸಾಹಿತ್ಯಕವಾಗಿ ಸ್ಮರಣೆ ಮಾಡಿಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಪ್ರತಿ ವರ್ಷ ದತ್ತಿ ಉಪನ್ಯಾಸ ಹಾಗೂ 10ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಸನ್ಮಾನ ಮಾಡುತ್ತಿರುವುದು ಮಾದರಿ ಎಂದರು. ಮುಖ್ಯ ಶಿಕ್ಷಕಿ ಶ್ವೇತನ್ ಚಂಗಪ್ಪ ಮಾತನಾಡಿ, ನಮ್ಮ ಹಿಂದಿನ ತಲೆಮಾರಿನ ಬದುಕಿನ ಶೈಲಿ ಹಾಗೂ ಈಗಿನ ಆಡಂಬರದ ಜೀವನ ಅವಲೋಕಿಸಿದಾಗ ಬಹಳಷ್ಟು ವ್ಯತ್ಯಾಸಗಳು ಕಂಡುಬರುತ್ತವೆ ಎಂದರು. ನಮ್ಮ ಪೂರ್ವಜರು ಹಾಕಿಕೊಟ್ಟ ಸಂಸ್ಕೃತಿ, ಆಚಾರ, ವಿಚಾರ ಸಂಪ್ರದಾಯಗಳನ್ನು ಇಂದಿನ ಮಕ್ಕಳು ಮುಂದುವರಿಸಿಕೊಂಡು ಹೋಗಬೇಕು ಎಂದರು.

ಇದೇ ಸಂದರ್ಭ 10ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಚೆನ್ನಮ್ಮ ಪ್ರೌಢಶಾಲೆಯ ಯು. ಅದವಿ ಅನುಪಸ್ಥಿತಿಯಲ್ಲಿ ಅವರ ಪಾಲಕರಾದ ಶಿಕ್ಷಕಿ ಅಮೀನಾ ಮತ್ತು ಉಮರ್ ದಂಪತಿಗೆ ಸನ್ಮಾನಿಸಿ ದತ್ತಿ ಪುರಸ್ಕಾರ ನೀಡಲಾಯಿತು. ಭಾಗಮಂಡಲ ಹೋಬಳಿ ಕಸಾಪ ಅಧ್ಯಕ್ಷ ಸುನಿಲ್ ಪತ್ರಾವೋ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್‌ವಿದ್ಯಾರ್ಥಿ ಹೇಮಂತ, ಶಿಕ್ಷಕಿ ಇಂದಿರಾ, ಶ್ರೀಧರ ಹಾಜರಿದ್ದರು. ವಿದ್ಯಾರ್ಥಿಗಳಿಂದ ನಾಡಗೀತೆ, ಮೌಲ್ಯಾ -ದೀಕ್ಷಿತಾ ಮತ್ತು ಪ್ರಣಿತ ಅವರ ಸ್ವರಚಿತ ಕವನ ವಾಚನ ಮನೋಜ್ಞವಾಗಿತ್ತು.