ಜಿಲ್ಲೆ

ರೋಗಿಗಳಿಗೆ ಹೆಚ್ಚಿನ ಸೌಲಭ್ಯ ನೀಡಲು ಕ್ರಮ

ನಾಪೋಕ್ಲು : ರೋಗಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿ ಆರೋಗ್ಯ ಸೇವೆ ಗುಣಮಟ್ಟ ಪಾಲನೆಗೆ ಗಮನ ನೀಡಲಾಗುವುದು ಎಂದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪೂವಯ್ಯ ಹೇಳಿದರು. ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ಸಂದರ್ಭ ಸೇರಿದಂತೆ ಇನ್ನಿತರ ತುರ್ತು ಸಂದರ್ಭದಲ್ಲಿ ಈ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಇಲ್ಲದ ಕಾರಣ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ತೊಡಕಾಗಿತ್ತು. ಆಗ ವಿವಿಧ ರೀತಿಯ ಸಮಸ್ಯೆಗಳು ಎದುರಾಗಿ ಸೇವೆ ವಿಳಂಬವಾಗಿತ್ತು. ಆದರೆ ಈಗ ನೂತನ ಸಮಿತಿ ರಚನೆಯಾಗಿದೆ. ಗ್ರಾಮೀಣ ಜನರಿಗೆ ಸೂಕ್ತವಾದ ಸೇವೆ ನೀಡುವಲ್ಲಿ ಸಮಿತಿ ಕಾರ್ಯಪ್ರವೃತ್ತವಾಗಿದೆ. ಆಸ್ಪತ್ರೆಗೆ ಬೇಕಾದ ಅವಶ್ಯಕತೆಗಳನ್ನು ಪರಿಶೀಲಿಸಿ, ರೋಗಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಸಮಿತಿ ಸಹಕಾರಿಯಾಗಲಿದೆ ಎಂದರು.

ಸಭೆಯಲ್ಲಿ ಸಮಿತಿ ಸದಸ್ಯರು ಲೆಕ್ಕಪತ್ರವನ್ನು ಪರಿಶೀಲಿಸಿದರು. ಆರೋಗ್ಯ ಕೇಂದ್ರದ ಸಮಗ್ರ ಮಾಹಿತಿಗಳನ್ನು ಪಡೆದುಕೊಂಡು ಮುಂದೆ ಕೈಗೊಳ್ಳಬೇಕಾದ ಕೆಲಸ, ಕಾರ್ಯ ಗಳ ಬಗ್ಗೆ ಚರ್ಚಿಸಲಾಯಿತು. ಕೇಂದ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಎಲ್ಲರೂ ಸಹಕರಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ, ಉಪಾಧ್ಯಕ್ಷೆ ಕಂಗಂಡ ಶಶಿ, ಸಮಿತಿ ಸದಸ್ಯರಾದ ಟಿ.ಆರ್. ರಾಜಪ್ಪ, ಎ.ಸಿ ಶಾಂತಿ, ಮೊಹಮ್ಮದ್ ಅಶ್ರಫ್, ಬಿ.ವಿ.ಅಪ್ಪ ಚೆಟ್ಟೋಳಂಡ ಮಿಥುನ್ ಮಾಚಯ್ಯ, ಡಾ.ಜೀವನ ಹಾಗೂ ಸಿಬ್ಬಂದಿ ಡಯಾನಾ, ಕರಿಷ್ಮಾ, ಎಸ್.ಡಿ. ಭವ್ಯಾ ಇದ್ದರು.