ಜಿಲ್ಲೆ

ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ

ಎ. ಆರ್. ರಘುರಾಮ


ನಾಪೋಕ್ಲು : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಅಧಿಕ ಮತಗಳಿಂದ ಗೆಲ್ಲಿಸಲು ಕಾರ್ಯಕರ್ತರು ಪಣ ತೊಡಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ನಾಪೋಕ್ಲು ಕೊಡವ ಸಮಾಜದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಹತ್ತು ತಿಂಗಳಿನಲ್ಲಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯ ನಡೆದಿದೆ. ಬಸ್ ನಿಲ್ದಾಣ, ಸಮುದಾಯ ಭವನ, ರಸ್ತೆ, ದೇವಾಲಯ, ಮಸೀದಿ, ಚರ್ಚುಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಕಷ್ಟು ನೆರವು ನೀಡಿದೆ.ಇಂತಹ ಅಭಿವೃದ್ಧಿ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರೆ ಎಂ.ಲಕ್ಷಣ್ ಅವರನ್ನು ಆಯ್ಕೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು. ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ನಮಗೆ ಪೊಳ್ಳು ಭರವಸೆಗಳು ಬೇಕಾಗಿಲ್ಲ. ಭ್ರಷ್ಟಾಚಾರ ರಹಿತ ಸರ್ಕಾರವನ್ನು ಜನತೆ ಆಯ್ಕೆ ಮಾಡಬೇಕಿದೆ. ಪ್ರಾಮಾಣಿಕ ಅಭ್ಯರ್ಥಿ ಲಕ್ಷಣ್ ಅವರನ್ನು ಗೆಲ್ಲಿಸಲು ಸಂಕಲ್ಪ ಮಾಡಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಮುಂಬರುವ ಚುನಾವಣೆ ಅಧಿಕಾರ ಮತ್ತು ಸಿದ್ಧಾಂತದ ನಡುವಿನ ಸವಾಲು ಆಗಿದೆ. ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ ಮತ್ತು ಸಂವಿಧಾನವನ್ನು ಪಾಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೋರಿದರು. ಅಭ್ಯರ್ಥಿ ಎಂ.ಲಕ್ಷಣ್, ಸಚಿವ ಕೆ.ವೆಂಕಟೇಶ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ ಪುಷ್ಪಾ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಮುಖಂಡರಾದ ಸುರಯ್ಯ ಅಬ್ರಹಾಂ, ನೆರವಂಡ ಉಮೇಶ್, ಹನೀಫ್, ಇಸ್ಮಾಯಿಲ್, ಎಂ.ಎಚ್. ಅಬ್ದುಲ್ ರೆಹಮಾನ್, ರಾಜೇಶ್ವರಿ, ವನಜಾಕ್ಷಿ, ಹೇಮಾ ಇತರರು ಇದ್ದರು.
ಸೇರ್ಪಡೆ: ಇದೇ ಸಂದರ್ಭ ಪಕ್ಷಕ್ಕೆ ಸೇರ್ಪಡೆಗೊಂಡ ಹಲವು ಮುಖಂಡರಿಗೆ ಶಾಸಕ ಪೊನ್ನಣ್ಣ ಶಾಲು ಹೊದಿಸಿ, ಬಾವುಟ ನೀಡಿ ಬರಮಾಡಿಕೊಂಡರು.