ಮಡಿಕೇರಿ: ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಸಿದವರ ಪೈಕಿ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರ ಆಸ್ತಿ ಮೌಲ್ಯ ಸದ್ದು ಮಾಡುತ್ತಿದೆ. ತಾವು ಒಟ್ಟು ೧೩೨ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ನಾಮಪತ್ರ ಸಲ್ಲಿಕೆ ವೇಳೆ ಘೋಷಣೆ ಮಾಡಿಕೊಂಡಿದ್ದಾರೆ. ೧೬.೭೨ ಕೋಟಿ ರೂ. ಮೊತ್ತದ ಸಾಲವೂ ಇದೆ ಎಂದು ನಾಮಪತ್ರದಲ್ಲಿ ನಮೂದಿಸಿದ್ದಾರೆ.
ಕೈಯಲ್ಲಿ ೧೭.೨೫ ಲಕ್ಷ ರೂ. ಹಣವಿದೆ. ವಿವಿಧೆಡೆ ೩.೬೨ ಕೋಟಿ ರೂ. ಹೂಡಿಕೆ ಮಾಡಲಾಗಿದೆ. ೯೧.೪೦ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ನಡೆಯುತ್ತಿದೆ. ೧.೪೩ ಕೋಟಿ ರೂ. ಮೊತ್ತದ ಮುಂಗಡ ನೀಡಿದ್ದಾರೆ. ೩೪.೫೫ ಕೋಟಿ ಮೊತ್ತದ ಸ್ಥಿರಾಸ್ತಿ, ೩೦ ಲಕ್ಷದ ರೂ. ಮೌಲ್ಯದ ಚಿನ್ನಾಭರಣಗಳು, ೧ ಕೋಟಿ ರೂ. ಮೌಲ್ಯದ ವಾಹನಗಳು ಮುತ್ತಪ್ಪ ಅವರ ಬಳಿ ಇದೆ.
ಸಾಲದ ವಿಷಯಕ್ಕೆ ಬಂದರೆ ಭೂಮಿ ಖರೀದಿಗಿ ಸಂಬಂಧಿಸಿದಂತೆ ೧೨.೮೬ ಕೋಟಿ ರೂ. ಮುಂಗಡ ಪಡೆದುಕೊಂಡಿದ್ದಾರೆ. ಡಿಸಿಸಿ ಬ್ಯಾಂಕ್‌ನಲ್ಲಿ ೪೧.೮೧ ಲಕ್ಷ ರೂ. ಸಾಲ ಇದೆ. ಕೆನರಾ ಬ್ಯಾಂಕ್‌ನಲ್ಲಿ ೩.೪೪ ಕೋಟಿ ರೂ. ಸಾಲ ಮಾಡಿದ್ದಾರೆ. ಒಟ್ಟು ಆಸ್ತಿಯಲ್ಲಿ ಜವಾಬ್ದಾರಿ ಮೊತ್ತ ಕಳೆದರೆ ಸದ್ಯ ಮುತ್ತಪ್ಪ ಅವರು ೧೧೫ ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.