ಜಿಲ್ಲೆ

ಬಿಜೆಪಿಗೆ ಮೈಸೂರು-ಕೊಡಗು ಪ್ರತಿಷ್ಠೆಯ ಕ್ಷೇತ್ರ: ನಾಪಂಡ ರವಿ ಕಾಳಪ್ಪ

ಆದರ್ಶ್. ಎಂ.ಕೆ.

ಮಡಿಕೇರಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಭಾರತೀಯ ಜನತಾ ಪಾರ್ಟಿಗೆ ಪ್ರತಿಷ್ಠೆಯ ಕಣವಾಗಿದ್ದು, ಸುಮಾರು ೨ಲಕ್ಷ ಮತಗಳ ಅಂತರದಿಂದ ಯದುವೀರ್ ಅವರನ್ನು ಗೆಲ್ಲಿಸುವ ಗುರಿ ಹೊಂದಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಅತ್ಯಧಿಕ ಮತಗಳ ಅಂತರದಿಂದ ಯದುವೀರ್ ಅವರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಕ್ಕ ಉತ್ತರ ನೀಡಲು ಮುಂದಾಗಿದ್ದಾರೆ ಎಂದರು.


ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರು ಸುಮಾರು ೧.೩೦ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಯದುವೀರ್‌ರವರು ೨ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ೮೫ ಸಾವಿರ ಮತಗಳ ಅಂತರವಿತ್ತು. ಈ ಬಾರಿ ೧ಲಕ್ಷಕ್ಕೂ ಅಧಿಕ ಗೆಲುವಿನ ಮತಗಳನ್ನು ನೀಡಲಿದ್ದೇವೆ ಎಂದು ತಿಳಿಸಿದರು.


ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಜನ ಮೆಚ್ಚಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ರವರು ಪ್ರವಾಸ ಮಾಡಿದ ಸಂದರ್ಭ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಅಭೂತಪೂರ್ವ ಸ್ವಾಗತ ದೊರೆತ್ತಿದೆ. ಗೆಲ್ಲಿಸುವ ಭರವಸೆಯೂ ನೀಡಿದ್ದಾರೆ. ಯದುವೀರ್‌ರವರು, ರಾಜ ವಂಶಸ್ಥ, ಯಾರ ಕೈಗೂ ಸಿಗುವುದಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಯದುವೀರ್ ಅವರು ಅತ್ಯಂತ ಸರಳ ಜೀವಿ ಮತ್ತು ಅಭಿವೃದ್ಧಿಪರ ಚಿಂತನೆ ಇರುವ ವ್ಯಕ್ತಿ ಎನ್ನುವುದು ಈಗಾಗಲೇ ಸಾಬೀತಾಗಿದೆ ಎಂದು ಹೇಳಿದರು.


ಚುನಾವಣೆಯಲ್ಲಿ ಸ್ಪರ್ಧೆ ಸಹಜವಾಗಿರುತ್ತದೆ. ಪ್ರತಿಸ್ಪರ್ಧಿಯನ್ನು ನಿರ್ಲಕ್ಷಿಸಿ ನಾವು ಮೈಮರೆಯುವುದಿಲ್ಲ. ಯದುವೀರ್‌ರವರ ಗೆಲುವಿಗಾಗಿ ನಿರಂತರ ಶ್ರಮ ವಹಿಸುತ್ತೇವೆ. ಈಗಾಗಲೇ ಬೂತ್ ಮಟ್ಟದಿಂದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವರೆಗೂ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದರು.


ಕಳೆದ ೧೦ ತಿಂಗಳ ಅಭಿವೃದ್ಧಿ ಕಾರ್ಯಗಳೇ ಲೋಕಸಭಾ ಚುನಾವಣೆಯಲ್ಲಿ ನಮಗೆ ಶ್ರೀರಕ್ಷೆಯಾಗಲಿದೆ ಎಂದು ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಮತ್ತು ಈ ಹಿಂದಿನ ಸರಕಾರದ ಅನುದಾನದ ಕಾಮಗಾರಿಗಳು ಎನ್ನುವುದು ಜನರಿಗೆ ಈಗಾಗಲೇ ಅರ್ಥವಾಗಿದೆ. ನೂತನ ಶಾಸಕರುಗಳು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದಿರುವುದು ಮತ್ತು ಈ ಹಿಂದಿನ ಬಿಜೆಪಿ ಶಾಸಕರುಗಳು ಮಾಡಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿಗೆ ಶ್ರೀರಕ್ಷಯಾಗಲಿದೆ ಎಂದು ರವಿ ಕಾಳಪ್ಪ ತಿಳಿಸಿದರು.


ರಾಜ್ಯದಲ್ಲಿ ಕಡಿಮೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಸರಕಾರ ಪತನವಾಗುತ್ತದೆ ಎನ್ನುವ ಆತಂಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದ್ದಾರೆ. ಇದೇ ಕಾರಣಕ್ಕೆ ಮೈಸೂರು-ಕೊಡಗು ಕ್ಷೇತ್ರ ಸೇರಿದಂತೆ ೨೦ ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಈ ಪ್ರಯತ್ನ ಫಲ ನೀಡುವುದಿಲ್ಲ ಎಂದು ಭವಿಷ್ಯ ನುಡಿದರು.


ಏ.೩ ರಂದು ನಾಮಪತ್ರ ಸಲ್ಲಿಕೆ: ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಏ.೩ ರಂದು ನಾಮಪತ್ರ ಸಲ್ಲಿಸಲಿದ್ದು, ಕೊಡಗು ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮೈಸೂರಿಗೆ ತೆರಳಲಿದ್ದಾರೆ ಎಂದರು.


ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ.ಲೋಕೇಶ್, ಜಿಲ್ಲಾ ವಕ್ತಾರ ಅರುಣ್ ಕುಮಾರ್ ಹಾಗೂ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.

ಇಂದು ಬೃಹತ್ ಸಮಾವೇಶ
ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಮಾ.೨೭ ರಂದು ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೊಡಗು ಉಸ್ತುವಾರಿ ಅಶ್ವತ್ಥ್ ನಾರಾಯಣ ಗೌಡ, ಅಭ್ಯರ್ಥಿ ಯದುವೀರ್, ಮಾಜಿ ಶಾಸಕ ರಾಮದಾಸ್, ಸಂಚಾಲಕ ರವಿ ಶಂಕರ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಬಿಜೆಪಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಮಾಜಿ ಪ್ರತಿನಿಧಿಗಳು, ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನಾಲ್ಕು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ನಾಪಂಡ ರವಿ ಕಾಳಪ್ಪ ಮಾಹಿತಿ ನೀಡಿದರು.

ಬೋಗಸ್ ಶ್ವೇತಪತ್ರ
ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣರವರು ಬೋಗಸ್ ಶ್ವೇತಪತ್ರ ಬಿಡುಗಡೆ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಟೀಕಿಸಿದರು.
ಅವರು ಬಿಡುಗಡೆ ಮಾಡಿರುವ ಶ್ವೇತಪತ್ರದಲ್ಲಿ ಅರ್ಧದಷ್ಟು ಅನುದಾನ ಈ ಹಿಂದಿನ ಶಾಸಕ ಕೆ.ಜಿ.ಬೋಪಯ್ಯರವರ ಅವಧಿಯದ್ದಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆ ಪೊನ್ನಣ್ಣ ಅವರು, ಜನರನ್ನು ಮರುಳು ಮಾಡಲು ಶ್ವೇತಪತ್ರ ಬಿಡುಗಡೆ ಮಾಡಿದ್ದಾರೆ. ಆದರೆ ಕೊಡಗು ಜಿಲ್ಲೆಯ ಜನ ಬುದ್ದಿವಂತರಾಗಿದ್ದು, ಇದನ್ನೆಲ್ಲ ನಂಬುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.