ಮೈಸೂರು: ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.35 ತ್ರಿವೇಣಿ ವೃತ್ತದಲ್ಲಿ ಭಾನುವಾರ ತ್ರಿವೇಣಿ ಗೆಳೆಯರ ಬಳಗದ ವತಿಯಿಂದ ‘ನನ್ನ ದೇಶ ನನ್ನ ಮಣ್ಣು ಅಭಿಯಾನ’ ಕಾರ್ಯಕ್ರಮದ ಅಂಗವಾಗಿ ಮನೆ ಮನೆಗೆ ತ್ರಿವರ್ಣ ಧ್ವಜ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬಿಜೆಪಿ ಮುಖಂಡ ಬಿ.ಆನಂದ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಹುತಾತ್ಮರಾದ ವೀರ ಯೋಧರನ್ನು ಗೌರವಿಸಲು ದೇಶಾದ್ಯಂತ ‘ನನ್ನ ದೇಶ ನನ್ನ ಮಣ್ಣು ಅಭಿಯಾನ’ಕ್ಕೆ ಕರೆ ನೀಡಿದ್ದಾರೆ. ದೇಶದ ಭದ್ರತೆಗಾಗಿ ಹೋರಾಡಿ ಹುತಾತ್ಮರಾದ ವೀರ ಯೋಧರ ಗೌರವಾರ್ಥ ಈ ಅಭಿಯಾನ ನಡೆಸಲಾಗುತ್ತಿದೆ. ಪ್ರತಿಯೊಬ್ಬ ಭಾರತೀಯರು ಈ ಒಂದು ಅಭಿಯಾನದಲ್ಲಿ ಭಾಗವಹಿಸಿ ಯೋಧರನ್ನು ಗೌರವಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ದೇಶದ ಜನರು ಶಾಂತಿಯಿಂದ, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಸೈನಿಕರು. ಯೋಧರು ಗಡಿ ಕಾಯದೆ ಹೋಗಿದ್ದರೆ ನಾವು ನೆಮ್ಮದಿಯಿಂದ ಬದುಕು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ದೇಶದ ಸೈನಿಕರು ಗಡಿಯಲ್ಲಿ ನಿದ್ದೆ ಬಿಟ್ಟು ನಮ್ಮ ದೇಶವನ್ನು ಕಾಪಾಡುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸ್ಥಳೀಯರಾದ ಧನರಾಜು, ಬಸವರಾಜು ಹಾಗೂ ಇತರರು ಪಾಲ್ಗೊಂಡಿದ್ದರು.