ಮಡಿಕೇರಿ:
ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟ ರೂಪಿಸಲು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರ ಹೋರಾಟ ಸಮಿತಿ ರಚನೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ, ಕಾಡು ಪ್ರಾಣಿಗಳ ಉಪಟಳ ನಿಗ್ರಹ ಸಂಬAಧ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ರೈತರು, ಬೆಳೆಗಾರರ ಸಭೆಯಲ್ಲಿ ಈ ಸಮಿತಿ ರಚಿಸಲಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವನ್ಯ ಜೀವಿಗಳಿಂದ ಉಂಟಾಗುತ್ತಿರುವ ಅನಾಹುತಗಳು ಮತ್ತು ಬೆಳೆಹಾನಿ ತಡೆಗಟ್ಟಲು ಸೂಕ್ತ ಪರಿಹಾರ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದ ನಂತರ 11 ಮಂದಿ ಒಳಗೊಂಡ ಹೋರಾಟ ಸಮಿತಿ ರಚಿಸಲಾಗಿದೆ.
ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಶಾಸಕರು, ಸಂಸದರು, ರೈತ ಮುಖಂಡರ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಂತರ ವನ್ಯಜೀವಿಗಳ ಉಪಟಳಕ್ಕೆ ಕಡಿವಾಣ ಹಾಕಲು ಕೋರಿ ಮೀನುಕೊಲ್ಲಿ ಶಾಖೆ ಉಪ ವಲಯ ಅರಣ್ಯಾಧಿಕಾರಿ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಲಾಯಿತು.
ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್. ವಿಶ್ವ, ಗ್ರಾಮದಲ್ಲಿ ಉಪಟಳ ನೀಡುತ್ತಿರುವ ಪುಂಡಾನೆಯೊAದನ್ನು ಕೂಡಲೆ ಸೆರೆ ಹಿಡಿಯಬೇಕಿದೆ. ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ, ಕಾಡು ಹಂದಿ, ಮುಳ್ಳುಹಂದಿ, ನವಿಲು, ಮಂಗ, ಕೆಂಜರಿಗಳ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಉಂಟಾಗುತ್ತಿದೆ. ಇವುಗಳ ನಡುವೆ ಹುಲಿ ಕಾಟ ಕೂಡ ಹೆಚ್ಚಾಗಿದೆ. ಈ ಭಾಗದಲ್ಲಿ ಅಳವಡಿಸಿರುವ ರೈಲ್ವೇ ಬ್ಯಾರಿಕೇಡ್ ಅವೈಜ್ಞಾನಿಕವಾಗಿದೆ. ಸೋಲಾರ್ ಬೇಲಿ ನಿಷ್ಪ್ರಯೋಜಕವಾಗಿದೆ. ಹಾನಿಗೊಳಗಾದ ಬೆಳೆಗಳಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕಿದೆ. ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕಿದೆ. ಸಮರ್ಪಕವಾದ ಆನೆ ಕಂದಕ ರಚಿಸಬೇಕಿದೆ. ಅಗತ್ಯವಿರುವ ಕಡೆ ರೈಲ್ವೆ ಬ್ಯಾರಿಕೇಡ್‌ಕೆಡ್ ಸ್ಲೈಡಿಂಗ್ ಗೇಟ್ ಅಳವಡಿಸಬೇಕಿದೆ. ಮುಂದಿನ ಒಂದು ತಿಂಗಳ ಒಳಗಾಗಿ ಈ ಎಲ್ಲಾ ಬೇಡಿಕೆಗಳಿಗೆ ಸೂಕ್ತವಾದ ಸ್ಪಂದನೆ ದೊರೆಯದಿದ್ದಲ್ಲಿ ಗ್ರಾಮಸ್ಥರೊಂದಿಗೆ ಪಕ್ಷಾತೀತವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭ ಗ್ರಾಮ ಪಂಚಾಯತಿ ಸದಸ್ಯರಾದ ರಕ್ಷಿತ್ ಮಾವಾಜಿ, ಕೆ.ವಿ. ಪ್ರೇಮಾನಂದ, ಮಾಜಿ ಸದಸ್ಯ ಸುಮೇಶ್ ಹಾಗೂ ರೈತರು ಮತ್ತು ಬೆಳೆಗಾರರು ಇದ್ದರು.