ವಿಜಯವಾಣಿ ಸುದ್ದಿಜಾಲ ಗದಗ
ಸ್ವಾತಂತ್ರ್ಯ ನಂತರ ಬದಲಾದ ಕೃಷಿ ಪದ್ಧತಿಯಿಂದ ನಮ್ಮ ಪಾರಂಪರಿಕ ಸಾವಯವ ಕೃಷಿ ಮರೆಯಾಗಿದೆ. ಈ ಬೆಳವಣಿಗೆ ತುಂಬಾ ಅಪಾಯಕಾರಿ ಎಂದು ಕಪ್ಪತ್ತಗುಡ್ಡ ಗದಗ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಸ್ಥಳಿಯ ಕಳಸಾಪೂರ ರಸ್ತೆಯಲ್ಲಿರುವ ನಂದಿವೇರಿ ಮಠದಲ್ಲಿ ಮಂಗಳವಾರ ಜರುಗಿದ ಸ್ವಾವಲಂಬಿ ಸಾವಯವ ಕೃಷಿಕರ ಸಮ್ಮೇಳನ ಮತ್ತು ಗೋಕೃಪಾಮೃತ ತಯಾರಿಕೆ ಹಾಗೂ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರಸ್ತುತ ಸಾವಯವ ಕೃಷಿಗೆ ಪ್ರತಿಯೊಬ್ಬ ರೈತರು ಮರುಳದೇ ಹೋದರೆ ನಮಗಾರಿಗೂ ಉಳಿಗಾಲವಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ರೈತರು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸಿ ಕೃಷಿ ಪದ್ಧತಿ ಹಾಳು ಮಾಡುತ್ತಿದ್ದಾರೆ. ರೈತರು ಹಂತ ಹಂತವಾಗಿ ಸಾವಯವ ಕೃಷಿಗೆ ಆಧ್ಯತೆ ನೀಡಿ ಈ ವಿಷ ವರ್ತುಲದಿಂದ ಹೊರ ಬರಬೇಕು ಎಂದರು.
ಡಿಸೆಂಬರ್ 6ಕ್ಕೆ ಕಪ್ಪತ್ತಗುಡ್ಡ ಉತ್ಸವ ಹಮ್ಮಿಕೊಳ್ಳಲಾಗಿದೆ. ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಭಾಗವಹಿಸಲಿದ್ದಾರೆ. ಈ ಉತ್ಸವ ರಂಜನೆ ಮನರಂಜನೆಯ ಉತ್ಸವ ಅಲ್ಲ. ಬದಲಿಗೆ ಕಪ್ಪತಗುಡ್ಡದೊಂದಿಗೆ ಸಮುದಾಯದ ಬಾಂಧವ್ಯವವನ್ನು ಇನ್ನಷ್ಟು ಗಟ್ಟಗೊಳಿಸುವ ಕಾರ್ಯಕ್ರಮವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಎಂದರು.
ಕೃಷಿ ವಿಜ್ಞಾನಿ ಮಾತನಾಡಿ, ಗುರುನಾಥ ಓದುಗೌಡರ ಮಾತನಾಡಿ, ನಿಸರ್ಗ ಲಾಂತರ ವರ್ಷಗಳಿಂದ ಒಂದು ವ್ಯವಸ್ಥೆ ಮಾಡಿಕೊಂಡಿದೆ. ಅದರಲ್ಲಿ ಮಾನವನ ಹಸ್ತೇಪ ಅತಿಯಾಗಿದ್ದು, ಇದರ ಅಡ್ಡ ಪರಿಣಾಮಗಳನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಈಗಿನಿಂದಲೇ ನಾವೆಲ್ಲಾ ಸಾವಯವ ಕೃಷಿಯತ್ತ ಮರುಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಚಿಂತನೆ, ಚರ್ಚೆ, ಸಾವಯವ ಕೃಷಿಕರ ಅನುಭವದ ಗೋಷ್ಠಿಗಳು ನಡೆದವು.
ಎಸ್.ಎ. ಸೂಡಿಶೆಟ್ಟರ, ಡಾ. ಎಸ್.ಎಲ್. ಪಾಟೀಲ, ಡಾ. ಬಿ.ಎನ್. ಮೋಟಗಿ, ಮೃತ್ಯುಂಜಯ ವಸ್ತ್ರದ, ಡಾ. ಸಿ. ಎಂ. ರಫಿ, ಮಂಗಳಾ ನೀಲಗುಂದ, ಅಜ್ಜಪ್ಪ ಕುಲಗೋಡ, ಬಿ. ಎಸ್. ಪಾಟೀಲ, ಹನುಮಂತಪ್ಪ ಚಿಂಚಲಿ, ಕೃಷ್ಣಗೌಡ ಪಾಟೀಲ, ಶಿವಣ್ಣ ಅರಹುಣಸಿ, ಸುರೇಶಗೌಡ ಪಾಟೀಲ ಹಲವರು ಇದ್ದರು.