ಬೆಂಗಳೂರು: ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆ ಇಂಧನ ದರ ಏರಿಕೆ ಮಾಡಿತ್ತು. ಈ ಬೆನ್ನಲ್ಲೇ ಈಗ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಾಲಿನ ದರ ಹೆಚ್ಚಿಸಿದೆ . ಪ್ರತಿ ಲೀಟರ್ ಹಾಲಿನ ದರ 2.10 ರೂ. ಹೆಚ್ಚಿಸಿದೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಎಂಎಫ್ ಅಧ್ಯಕ್ಷರಾದ ಭೀಮಾ ನಾಯ್ಕ್ ಮಾತನಾಡಿ, ಪ್ರತಿ ಲೀಟರ್ ಹಾಲಿನ ದರವನ್ನ 2.10 ರೂ. ಹಾಗೂ ಅರ್ಧ ಲೀಟರ್ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ. ಹಾಲಿನದ ದರ ಮಾತ್ರ ಹೆಚ್ಚಳವಾಗಿದೆ. ಹಾಲಿನಿಂದ ತಯಾರಿಸುವ ಉತ್ಪನ್ನ ಹಾಗೂ ಮೊಸರು ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
ಇದರೊಂದಿಗೆ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್ (1 ಲೀಟರ್) ಪ್ಯಾಕೆಟ್ ಹಾಲು ಇನ್ಮುಂದೆ 1,050 ಎಂಎಲ್ ಹಾಗೂ ಅರ್ಧ ಲೀಟರ್ ಪ್ಯಾಕೆಟ್ ಹಾಲು 550 ಎಂಎಲ್ ಹೆಚ್ಚುವರಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ. ಮೊಸರಿಗೆ ಈ ಹಿಂದಿನ ದರವೇ ಅನ್ವಯವಾಗಲಿದೆ.
ಸರ್ಕಾರ ಕೆಲವು ದಿನಗಳ ಹಿಂದೆ ಇಂಧನ ದರ ಏರಿಕೆ ಮಾಡಿತ್ತು. ಈ ಬೆನ್ನಲ್ಲೇ ಈಗ ಹಾಲಿನ ದರವನ್ನೂ ಹೆಚ್ಚಳ ಮಾಡಲಾಗಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಕೆ ಮಾಡಲು ಬೆಲೆ ಏರಿಕೆ ಮಾಡಲಾಗುತ್ತಿದೆ. ಇನ್ನು ಯಾವಯಾವ ವಸ್ತುಗಳ ಬೆಲೆ ಏರಿಕೆ ಆಗುತ್ತದೆ ಎಂದು ಜನಸಾಮಾನ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ
ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ
ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ
ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ
ಶುಭಂ ಹಾಲು 48ರಿಂದ 50 ರೂ
ಸಮೃದ್ದಿ ಹಾಲು 51ರಿಂದ 53ರೂ
ಶುಭಂ (ಟೋನ್ಡ್ ಹಾಲು) 49ರಿಂದ 51ರೂ
ಸಂತೃಪ್ತಿ ಹಾಲು 55 ರಿಂದ 57 ರೂ
ಶುಭಂ ಗೋಲ್ಡ್ ಹಾಲು 49ರಿಂದ 51ರೂ
ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ