ಉಡುಪಿ: ನಂದಿನಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಮಾರಾಟವಾಗುವ ಬ್ರಾಂಡ್. ನಮ್ಮ ರಾಜ್ಯದಲ್ಲಿ ನಂದಿನಿ ಅಗಾಧವಾದ ವ್ಯವಹಾರ ನಡೆಸುತ್ತಿದೆ. ಎಂಟು ರಾಜ್ಯಗಳ ಹಾಲು ನಮ್ಮ ರಾಜ್ಯದಲ್ಲಿ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಕೆಎಂಎಫ್ ನಂದಿನಿಗೆ ಸರಿಗಟ್ಟುವ ಮಾರುಕಟ್ಟೆ ಮತ್ತೊಂದಿಲ್ಲ. ನಿತ್ಯ 74 ಲಕ್ಷ ಲೀಟರ್ ಹಾಲು ಸಂಗ್ರಹಣೆ ಮಾಡಲಾಗುತ್ತಿದ್ದು, ಒಂದು ಕೋಟಿ ಲೀಟರ್‌ಗೆ ಬೇಡಿಕೆ ಇದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಂದಿನಿ-ಅಮುಲ್ ವಿವಾದದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮುಲ್ ಸೇರಿದಂತೆ ಯಾವುದೇ ಬ್ರಾೃಂಡ್ ಬಂದರೂ ರಾಜ್ಯದ ರೈತರಿಗೆ ಯಾವುದೇ ತೊಂದರೆ ಆಗಲ್ಲ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬೇರೆ ರಾಜ್ಯದ ಉತ್ಪನ್ನ ಬರಬಹುದು. ರಾಜಕೀಯ ಕಾರಣಗಳಿಗೆ ಜನರ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದ್ದು, ಇದನ್ನು ರೈತರು ಮತ್ತು ಜನತೆ ಅರ್ಥಮಾಡಿಕೊಳ್ಳಬೇಕು ಎಂದರು. ಗುಜರಾತ್ ಬಗ್ಗೆ ಕೆಲವರಿಗೆ ಆತಂಕ ಶುರುವಾಗಿದೆ. ಗುಜರಾತ್ ಮಾದರಿ ಎಂದರೆ ಸಂಕಟ. ಗುಜರಾತ್ ನಮ್ಮದೇ ದೇಶದ ಒಂದು ಭಾಗ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಅಮುಲ್ ಸೇರಿದಂತೆ ಯಾವುದೇ ಬ್ರಾೃಂಡ್ ಬಂದರೂ ನಂದಿನಿ ತಡೆಗಟ್ಟಲು ಸಾಧ್ಯವಿಲ್ಲ ಎಂದರು.
ಅಭ್ಯರ್ಥಿಗಳ ಬದಲಾವಣೆ ಸಾಧ್ಯತೆ
ಎಲ್ಲ ರಾಜಕೀಯ ಪಕ್ಷಗಳು ಮುಖಂಡರ ನೇರಕ್ಕೆ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಆದರೆ ಬಿಜೆಪಿ ಜಿಲ್ಲೆಗಳ ಕಾರ್ಯಕರ್ತರ ಅಭಿಪ್ರಾಯ ಕೇಳಿದೆ. ಅಭ್ಯರ್ಥಿ ಯಾರು ಅನ್ನೋದನ್ನ ಕೇಂದ್ರ ಮತ್ತು ರಾಜ್ಯ ಮುಖಂಡರು ನಿರ್ಧರಿಸಲಿದ್ದಾರೆ. ಯಾರೇ ಅಭ್ಯರ್ಥಿಯಾದರೂ, ಮತ್ತೊಮ್ಮೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲುತ್ತದೆ. ಕರಾವಳಿಯಲ್ಲಿ ಅಭ್ಯರ್ಥಿಗಳ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹದ ಮೇಲೆ, ಸಮೀಕ್ಷೆಯ ಮೇಲೆ ಗೆಲ್ಲುವ ಅಭ್ಯರ್ಥಿಗೆ ಅವಕಾಶ ಸಿಗುತ್ತದೆ ಎಂದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕಾರಣ ಇತಿಹಾಸದಲ್ಲಿ ಮಾದರಿಯಾಗಿದ್ದಾರೆ. ಸ್ಪರ್ಧಾ ರಾಜಕಾರಣದಿಂದ ಹಿಂದೆ ಸರಿದರೂ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತಿಲ್ಲ ಎಂದಿದ್ದಾರೆ. ಹಾಲಾಡಿಯವರು ಹಿಂದೆ ಸರಿದ ಹಿನ್ನೆಲೆಯಲ್ಲಿ ಕುಂದಾಪುರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಒಂದಿಷ್ಟು ಬದಲಾವಣೆ ಆಗಬಹುದು. ಕುಂದಾಪುರ ಕ್ಷೇತ್ರದಲ್ಲಿ ಹೊಸ ಮುಖ ಬರಬೇಕಾಗಿದೆ. ಒಂದೊಂದು ಕ್ಷೇತ್ರದಲ್ಲೂ ಐದಾರು ಆಕಾಂಕ್ಷಿಗಳಿದ್ದಾರೆ. ನಮಗೆ ಅವಕಾಶ ಕೊಡಿ ಗೆಲ್ಲುತ್ತೇವೆ ಎಂಬ ವಾತಾವರಣ ನಿರ್ಮಿಸಿದ್ದಾರೆ. ಸ್ಪರ್ಧಾಕಾಂಕ್ಷಿಗಳು ಹೆಚ್ಚಿರುವ ರಾಜಕೀಯ ಪಕ್ಷದಲ್ಲಿ ಟಿಕೆಟ್ ಘೋಷಣೆ ವಿಳಂಬವಾಗುವುದು ಸಹಜ ಎಂದರು.